ಪ್ರಾತಿನಿಧಿಕ ಚಿತ್ರ 
ದೇಶ

ರೈಲಿನಲ್ಲಿ ಪತ್ತೆಯಾಗಿದ್ದ ನವಜಾತ ಶಿಶು 'ವೀರ್' ಚೇತರಿಕೆ; ದತ್ತು ಪಡೆಯಲು 40ಕ್ಕೂ ಹೆಚ್ಚು ಕುಟುಂಬಗಳು ಮುಂದು!

ಪಾಟ್ನಾ-ಚಂಡೀಗಢ ವಿಶೇಷ ರೈಲಿನಲ್ಲಿ ಪ್ರಯಾಣಿಕರು ಚೀಲದೊಳಗೆ ಮಗು ಇರುವುದನ್ನು ಗಮನಿಸಿದ್ದಾರೆ. ಬಳಿಕ ಮಗುವನ್ನು ಮೊರಾದಾಬಾದ್‌ನ ಮಹಿಳಾ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ (SNCU) ಕರೆದೊಯ್ಯಲಾಯಿತು.

ಲಕ್ನೋ: ಜೂನ್ 22ರಂದು ಮೊರಾದಾಬಾದ್ ವ್ಯಾಪ್ತಿಯ ಪಾಟ್ನಾ-ಚಂಡೀಗಢ ವಿಶೇಷ ರೈಲಿನೊಳಗೆ ಚೀಲದಲ್ಲಿ ಪತ್ತೆಯಾಗಿದ್ದ ನವಜಾತ ಶಿಶು ವೀರ್, ಜೀವನ್ಮರಣ ಹೋರಾಟದ ನಂತರ ಚೇತರಿಸಿಕೊಳ್ಳುತ್ತಿದ್ದು, ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಅಲ್ಲದೆ, ವೀರ್‌ನನ್ನು ದತ್ತು ಪಡೆಯಲು 40ಕ್ಕೂ ಹೆಚ್ಚು ಕುಟುಂಬಗಳು ಮುಂದೆ ಬಂದಿವೆ.

ಮೊರಾದಾಬಾದ್ ಜಿಲ್ಲಾ ಪರೀಕ್ಷಾಧಿಕಾರಿ ಎಸ್‌ಪಿ ಗೌತಮ್, ಸುಮಾರು 10 ಗಂಟೆಗಳ ಕಾಲ ಚೀಲದೊಳಗೆ ಇದ್ದ ಮಗು ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು. ಮಹಿಳಾ ಆಸ್ಪತ್ರೆ ಸಿಬ್ಬಂದಿ ಈಗ ಪ್ರೀತಿಯಿಂದ ಆ ಮಗುವಿಗೆ ವೀರ್ ಎಂದು ಹೆಸರಿಟ್ಟಿದ್ದಾರೆ. ಮಗು ಇದೀಗ ಚೇತರಿಸಿಕೊಳ್ಳುತ್ತಿದೆ ಎಂದರು.

ಪಾಟ್ನಾ-ಚಂಡೀಗಢ ವಿಶೇಷ ರೈಲಿನಲ್ಲಿ ಪ್ರಯಾಣಿಕರು ಚೀಲದೊಳಗೆ ಮಗು ಇರುವುದನ್ನು ಗಮನಿಸಿದ್ದಾರೆ. ಬಳಿಕ ಮಗುವನ್ನು ಮೊರಾದಾಬಾದ್‌ನ ಮಹಿಳಾ ಆಸ್ಪತ್ರೆಯ ವಿಶೇಷ ನವಜಾತ ಶಿಶು ಆರೈಕೆ ಘಟಕಕ್ಕೆ (SNCU) ಕರೆದೊಯ್ಯಲಾಯಿತು.

ಮಹಿಳಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕಿ ಡಾ. ನಿರ್ಮಲಾ ಪಾಠಕ್ ಮಾತನಾಡಿ, ಆಮ್ಲಜನಕದ ಕೊರತೆಯಿಂದ ಉಂಟಾದ ತೀವ್ರ ಉಸಿರಾಟದ ತೊಂದರೆಗಳಿಂದಾಗಿ ವೀರ್‌ನನ್ನು ಆರಂಭದಲ್ಲಿ ಸಿಪಿಎಪಿ (ನಿರಂತರ ಧನಾತ್ಮಕ ವಾಯುಮಾರ್ಗ ಒತ್ತಡ) ದಲ್ಲಿ ಇರಿಸಲಾಗಿತ್ತು ಎಂದರು.

ಸುಮಾರು 10 ಗಂಟೆಗಳ ಕಾಲ ಚೀಲದೊಳಗೆ ಸಿಲುಕಿಕೊಂಡಿದ್ದರಿಂದ ಹೈಪೋಕ್ಸಿಯಾಕ್ಕೆ ಕಾರಣವಾಯಿತು. ಸಕಾಲಿಕವಾಗಿ ವೈದ್ಯಕೀಯ ಆರೈಕೆ ಸಿಗದಿದ್ದರೆ ಮಾರಕವಾಗಬಹುದಾದ ಸ್ಥಿತಿ ಇದಾಗಿದೆ. ಶಿಶುವಿನ ಉಸಿರಾಟದ ಪ್ರಮಾಣ ಅಸಹಜವಾಗಿ ಹೆಚ್ಚಾಗಿತ್ತು ಮತ್ತು 72 ಗಂಟೆಗಳ ಕಾಲ CPAP ಬೆಂಬಲದಲ್ಲಿ ಇರಿಸಲಾಯಿತು. ನಂತರ ಪ್ರಮಾಣಿತ ಆಮ್ಲಜನಕ ಬೆಂಬಲಕ್ಕೆ ಸ್ಥಳಾಂತರಿಸಲಾಯಿತು ಎಂದು ಡಾ. ಪಾಠಕ್ ಹೇಳಿದರು.

'ಮಗುವಿನ ಸ್ಥಿತಿ ಸುಧಾರಿಸುತ್ತಿದ್ದಂತೆ, ಆಮ್ಲಜನಕದ ಬೆಂಬಲವನ್ನು ಕ್ರಮೇಣ ಹಿಂತೆಗೆದುಕೊಳ್ಳಲಾಯಿತು ಮತ್ತು ಅವನು ಈಗ ಸ್ವತಂತ್ರವಾಗಿ ಉಸಿರಾಡುತ್ತಿದ್ದಾನೆ' ಎಂದು ಅವರು ಹೇಳಿದರು.

ಮಗು ಇನ್ನೂ ಎರಡು ಗಂಟೆಗಳ ಕಾಲ ಚೀಲದಲ್ಲಿಯೇ ಇದ್ದಿದ್ದರೆ, ಆತನನ್ನು ಉಳಿಸುವುದು ಅಸಾಧ್ಯವಾಗಿತ್ತು. ಆದಾಗ್ಯೂ, ವೀರ್ ಇನ್ನೂ ಆಹಾರ ತೆಗೆದುಕೊಳ್ಳುವಲ್ಲಿ ತೊಂದರೆ ಎದುರಿಸುತ್ತಿದ್ದಾನೆ ಮತ್ತು IV ಡ್ರಿಪ್ಸ್ ಮೂಲಕ ಪೋಷಣೆ ಪಡೆಯುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

'ಮೊದಲು, ಆತ ಚೀಲದೊಳಗೆ ಗಂಟೆಗಟ್ಟಲೆ ಇದ್ದನು ಮತ್ತು ನಂತರ ಐಸಿಯುನಲ್ಲಿ ತನ್ನ ಪ್ರಾಣಕ್ಕಾಗಿ ಹೋರಾಡಿದನು. ಆತ ನಿಜವಾಗಿಯೂ ವೀರ್ (ಧೈರ್ಯಶಾಲಿ) ಎಂಬ ಹೆಸರಿಗೆ ಅರ್ಹನಾಗಿದ್ದಾನೆ' ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೇಳಿದರು.

ವೀರ್ ಸಂಪೂರ್ಣವಾಗಿ ಗುಣಮುಖನಾದ ನಂತರ, ಅವನನ್ನು ಸರ್ಕಾರಿ ಬೆಂಬಲಿತ ಮಕ್ಕಳ ಕಲ್ಯಾಣ ಸಂಸ್ಥೆಯಾದ ಚೈಲ್ಡ್‌ಲೈನ್‌ಗೆ ಹಸ್ತಾಂತರಿಸಲಾಗುವುದು. ಈಮಧ್ಯೆ, ರೈಲಿನಲ್ಲಿ ಮಗುವನ್ನು ಬಿಟ್ಟುಹೋದವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಮಾಂಡೆಂಟ್ ಉತ್ಕರ್ಷ್ ನಾರಾಯಣ್ ಮಾತನಾಡಿ, ಶಿಶು ಪತ್ತೆಯಾದ ಚೀಲದಲ್ಲಿ ಸಿಮ್ ಕಾರ್ಡ್ ಕೂಡ ಪತ್ತೆಯಾಗಿದ್ದು, ಎಲೆಕ್ಟ್ರಾನಿಕ್ ಕಣ್ಗಾವಲು ಮೂಲಕ ಅಪರಾಧಿಯನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಮತ್ತೊಂದು ಪ್ರಕರಣದಲ್ಲಿ, ಕಳೆದ ವರ್ಷ ಧಂತೇರಸ್ ಹಬ್ಬದ ಮುನ್ನಾದಿನ ಮೈನಾಥೇರ್‌ನ ಗಗನ್ ತಿರಾಹಾ ಬಳಿಯ ಪೊದೆಗಳಲ್ಲಿ ಪತ್ತೆಯಾಗಿದ್ದ ಹೆಣ್ಣು ಶಿಶು ಕೊನೆಗೂ ಮನೆ ಕಂಡುಕೊಂಡಿದೆ. ಬೀದಿ ನಾಯಿಗಳು ಲಕ್ಷ್ಮಿಯನ್ನು ತೀವ್ರವಾಗಿ ಗಾಯಗೊಳಿಸಿದ್ದವು, ಆಕೆಯ ತೊಡೆಯ ಮೇಲೆ ಆಳವಾದ ಗಾಯಗಳಿದ್ದವು.

ಮಹಿಳಾ ಆಸ್ಪತ್ರೆಯ SNCU ನಲ್ಲಿ ಸುಮಾರು ಆರು ವಾರಗಳ ಚಿಕಿತ್ಸೆ ಪಡೆದ ನಂತರ ಚೆನ್ನೈ ಮೂಲದ ವೈದ್ಯ ದಂಪತಿ ಆಕೆಯನ್ನು ದತ್ತು ಪಡೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಚಿತ್ತಾಪುರದಲ್ಲಿ ಪಥ ಸಂಚಲನ: ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ; RSSಗೆ ನಿರಾಸೆ

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: 'ನಮ್ಮ ತಲೆಗೇ ಬಂದೂಕು ಇಟ್ಟುಕೊಳ್ಳುವ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಲ್ಲ': ಪಿಯೂಷ್ ಗೋಯಲ್

Moonlighting: ಭಾರತದ ಮೂಲದ ವ್ಯಕ್ತಿಗೆ ಅಮೆರಿಕದಲ್ಲಿ 15 ವರ್ಷ ಜೈಲು!, ಇ-ಮೇಲ್ ನಿಂದ ಕಳ್ಳಾಟ ಬಯಲು

ಗಾಯಕಿ ವಾರಿಜ ಶ್ರೀ ಜೊತೆ ಸಪ್ತಪದಿ ತುಳಿದ ಸಂಗೀತ ನಿರ್ದೇಶಕ ರಘು ದೀಕ್ಷಿತ್, ಫೋಟೋ ವೈರಲ್!

ರಾಜ್ಯದಲ್ಲಿ 13 ಕಂಪನಿಗಳಿಂದ 27 ಸಾವಿರ ಕೋಟಿ ರೂ. ಹೂಡಿಕೆಗೆ ಸರ್ಕಾರ ಅಸ್ತು, 11 ಹೊಸ ಯೋಜನೆ!

SCROLL FOR NEXT