ಅಹಮದಾಬಾದ್: ಗುಜರಾತ್ ರಾಜ್ಯದ ಮೆಹ್ಸಾನಾ ಜಿಲ್ಲೆಯ ಗಿಲೋಸನ್ ಗ್ರಾಮದಲ್ಲಿ 19 ವರ್ಷದ ಯುವತಿಯನ್ನು ಸರಪಂಚ್ ಆಗಿ ಆಯ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಗುಜರಾತ್ ರಾಜ್ಯ ಚುನಾವಣಾ ಆಯೋಗವು ತೀವ್ರ ಟೀಕೆಗೆ ಗುರಿಯಾಗಿದೆ. ಇದು ಕನಿಷ್ಠ ವಯಸ್ಸಿನ ಅವಶ್ಯಕತೆಯಾದ 21 ವರ್ಷಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಈ ಅಕ್ರಮವು ಚುನಾವಣಾ ಪ್ರಕ್ರಿಯೆಯ ಸಮಯದಲ್ಲಿ ಬೆಳಕಿಗೆ ಬಂದಿಲ್ಲ, ಬದಲಾಗಿ ಗಾಂಧಿನಗರದಲ್ಲಿ ಮುಂಬರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಿಂದ ಸನ್ಮಾನಿಸಲ್ಪಡುವ ಯುವ ಸರಪಂಚ್ಗಳ ಪಟ್ಟಿಯನ್ನು ಸಿದ್ಧಪಡಿಸುವಾಗ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ದಾಖಲೆಗಳ ಪರಿಶೀಲನೆಯ ಸಮಯದಲ್ಲಿ, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಹೊಸದಾಗಿ ಆಯ್ಕೆಯಾದ ಸರಪಂಚ್ ಅಫ್ರೋಜ್ಬಾನು ಸಿಪೈ ಅವರ ವಯಸ್ಸಿನಲ್ಲಿ ಹೊಂದಾಣಿಕೆಯಾಗದಿರುವುದನ್ನು ಕಂಡುಹಿಡಿದರು. ಅವರ ಆಧಾರ್ ಕಾರ್ಡ್ ಡಿಸೆಂಬರ್ 8, 2004 ರ ಜನ್ಮ ದಿನಾಂಕವನ್ನು ತೋರಿಸುತ್ತದೆ, ಆದರೆ ಅವರ ಶಾಲಾ ಶಿಕ್ಷಣ ಪ್ರಮಾಣಪತ್ರದಲ್ಲಿ ಜನವರಿ 7, 2005 ಎಂದು ಉಲ್ಲೇಖಿಸಲಾಗಿದೆ. ಇದರಿಂದ ಅವರ ವಯಸ್ಸು 19 ವರ್ಷ ಮತ್ತು 8 ತಿಂಗಳು ಎಂದು ಕಂಡುಬರುತ್ತಿದ್ದು, ಸ್ಪರ್ಧಿಸಲು ಅನರ್ಹರಾಗಿದ್ದಾರೆ.
ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದೆ. ಅರ್ಹತೆಯನ್ನು ಪರಿಶೀಲಿಸುವ ಜವಾಬ್ದಾರಿಯುತ ಚುನಾವಣಾ ಅಧಿಕಾರಿಗಳು ಮತ್ತು ರಿಟರ್ನಿಂಗ್ ಅಧಿಕಾರಿಗಳ ಜವಾಬ್ದಾರಿ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿವಾದ ಉಲ್ಬಣಗೊಳ್ಳುತ್ತಿದ್ದಂತೆ, ಮೆಹ್ಸಾನಾದ ಪ್ರಾಂತೀಯ ಅಧಿಕಾರಿ ಉರ್ವಿಶ್ ವಾಲ್ಯಾಂಡ್, "ಗಿಲೋಸನ್ ಗ್ರಾಮ ಪಂಚಾಯತ್ನ ಚುನಾಯಿತ ಸರ್ಪಂಚ್ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ತಾಲ್ಲೂಕು ಅಭಿವೃದ್ಧಿ ಅಧಿಕಾರಿ ವರದಿಯನ್ನು ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಸಮಯದಲ್ಲಿ, ಅಭ್ಯರ್ಥಿಯು ತನ್ನ ವಯಸ್ಸನ್ನು 21 ವರ್ಷ ಎಂದು ಘೋಷಿಸಿದರು, ಅದರ ಆಧಾರದ ಮೇಲೆ ಚುನಾವಣಾಧಿಕಾರಿ ಅವರ ಫಾರ್ಮ್ ನ್ನು ಸ್ವೀಕರಿಸಿ ಸ್ಪರ್ಧಿಸಲು ಮುಂದುವರಿಸಲು ಅವಕಾಶ ನೀಡಿದರು. ನಂತರ ಅವರನ್ನು ವಿಜೇತರೆಂದು ಘೋಷಿಸಲಾಯಿತು ಎಂದು ವಾಲ್ಯಾಂಡ್ ಹೇಳಿದರು.
ನಾಮನಿರ್ದೇಶನ ಫಾರ್ಮ್ನಲ್ಲಿ ವಯಸ್ಸನ್ನು ಮಾತ್ರ ನಮೂದಿಸಬೇಕು, ಅಭ್ಯರ್ಥಿಯು 21 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಬರೆದಿದ್ದರು. ನಾವು ಈಗ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿದ್ದೇವೆ, ಎಲ್ಲಾ ಸಂಬಂಧಿತ ವಿವರಗಳನ್ನು ರಾಜ್ಯ ಚುನಾವಣಾ ಆಯೋಗಕ್ಕೂ ಕಳುಹಿಸಿದ್ದೇವೆ. ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವನ್ನು ಆಯೋಗ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಅಪ್ರಾಪ್ತ ವಯಸ್ಸಿನವರಾಗಿದ್ದರೂ, ಪರ್ಮಾರ್ ಅಫ್ರೋಜ್ಬಾನು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಮೂನೆಯಲ್ಲಿ ಎಲ್ಲಿಯೂ ನನ್ನ ಜನ್ಮ ದಿನಾಂಕವನ್ನು ಬರೆಯಲು ಕೇಳಿರಲಿಲ್ಲ, ನನ್ನ ವಯಸ್ಸು ಕೇಳಿದ್ದರು, ನಾನು 21 ಎಂದು ಬರೆದಿದ್ದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಹೇಳಿದರು.
ಆಡಳಿತ ಮಂಡಳಿಯು ಈಗ ನಿಯಮಗಳ ಪ್ರಕಾರ ಅವರ ರಾಜೀನಾಮೆಯನ್ನು ಒತ್ತಾಯಿಸುವ ಬಗ್ಗೆ ಯೋಚಿಸುತ್ತಿದೆ, ಆದರೆ ಈ ಪ್ರಮಾದವು ಚುನಾವಣಾ ಪರಿಶೀಲನಾ ಪ್ರಕ್ರಿಯೆಯಲ್ಲಿನ ದೊಡ್ಡ ಲೋಪವನ್ನು ಈಗಾಗಲೇ ಬಹಿರಂಗಪಡಿಸಿದೆ. ಈ ಘಟನೆಯು ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೂ ಮುನ್ನ ಸ್ಥಳೀಯ ಆಡಳಿತವನ್ನು ಮುಜುಗರಕ್ಕೀಡುಮಾಡಿದೆ ಮಾತ್ರವಲ್ಲದೆ, ತಳಮಟ್ಟದ ಚುನಾವಣಾ ಕಾರ್ಯವಿಧಾನಗಳನ್ನು ಬಾಧಿಸುತ್ತಿದೆ ಎಂದು ಹೇಳಲಾದ ವ್ಯವಸ್ಥಿತ ಲೋಪಗಳ ಮೇಲೆ ಬೆಳಕು ಚೆಲ್ಲಿದೆ.