ಹೈದ್ರಾಬಾದ್: ನಗರದ ಸಿಟಿ ಸಿವಿಲ್ ಕೋರ್ಟ್, ರಾಜ ಭವನ ಮತ್ತು ಜಿಮ್ ಖಾನ ಕ್ಲಬ್ ಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದ ನಂತರ ಮಂಗಳವಾರ ಸ್ಥಳದಲ್ಲಿ ಆತಂಕದ ವಾತವಾರಣ ನಿರ್ಮಾಣವಾಯಿತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಎಲ್ಲಾ ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು.
ನಗರದ ಸಿವಿಲ್ ಕೋರ್ಟ್ ಮತ್ತು ಜಿಮ್ ಖಾನ ಕ್ಲಬ್ ನಲ್ಲಿ 4 ಆರ್ ಡಿಎಕ್ಸ್ ಆಧಾರಿತ ಸುಧಾರಿತ ಸ್ಫೋಟಕ ವಸ್ತು (IED) ಇಟ್ಟಿದ್ದು, ಅವುಗಳು ಮಂಗಳವಾರ ಸ್ಫೋಟಗೊಳ್ಳಲಿವೆ. ಎಲ್ಲಾ ಜಡ್ಜ್ ಗಳು, ಸಿಬ್ಬಂದಿ ಕೂಡಲೇ ಅಲ್ಲಿಂದ ಜಾಗ ಖಾಲಿ ಮಾಡಿ ಎಂದು ಅಪರಿಚಿತ ವ್ಯಕ್ತಿಯೋರ್ವ ಸಿಟಿ ಸಿವಿಲ್ ಕೋರ್ಟ್ ಮತ್ತು ಜಿಮ್ ಖಾನ ಕ್ಲಬ್ ಗೆ ಕಳುಹಿಸಿದ ಇ-ಮೇಲ್ ಬೆದರಿಕೆ ಸಂದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೇ, ಸ್ಪೋಟದ ಕಡಿಮೆ ತೀವ್ರತೆ ಹಾಗೂ ಸಾವು ನೋವು ಹೆಚ್ಚಿನ ಪ್ರಮಾಣದಲ್ಲಿ ಆಗದಿರಲಿ ಎಂಬ ಉದ್ದೇಶದಿಂದ ನಾಲ್ಕು RDX 800-ಬೇಸ್ ಫ್ಯೂಸ್‌ಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗಿದೆ ಎಂದು ಇಮೇಲ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ದಯವಿಟ್ಟು ನ್ಯಾಯಾಲಯದ ಆವರಣದಿಂದ ಎಲ್ಲಾ ನ್ಯಾಯಾಧೀಶರು, ದೂರುದಾರರನ್ನು ಸ್ಥಳಾಂತರಿಸಿ. ನ್ಯಾಯಾಲಯ ಸ್ಫೋಟಗೊಂಡ 23 ನಿಮಿಷಗಳ ನಂತರ ಜಿಮ್ ಖಾನ ಕ್ಲಬ್ ಹೈದರಾಬಾದ್ ಸ್ಫೋಟಗೊಳ್ಳಲಿದೆ ಎಂದು ಇ-ಮೇಲ್ ಸಂದೇಶದಲ್ಲಿ ಹೇಳಲಾಗಿದೆ.
ತದನಂತರ ಪೊಲೀಸರು ಸಿವಿಲ್ ಕೋರ್ಟ್ ಹಾಗೂ ಜಿಮ್ ಖಾನ್ ಹಾಗೂ ರಾಜಭವನದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಇ-ಮೇಲ್‌ನ ಮೂಲ ಪತ್ತೆಹಚ್ಚಲು ಮತ್ತು ಕಳುಹಿಸುವವರನ್ನು ಗುರುತಿಸಲು ತನಿಖೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.