ಕತ್ರಜ್: ಪುಣೆಯ ಕತ್ರಜ್‌ನ ಖೋಪ್ಡೆ ನಗರ ಪ್ರದೇಶದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂರನೇ ಮಹಡಿಯ ಕಿಟಕಿಯಿಂದ ಹೊರಬಂದು ನೇತಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯೋಗೇಶ್ ಅರ್ಜುನ್ ಚವಾಣ್ ರಕ್ಷಿಸಿದ್ದು, ಈ ಮೂಲಕ ದೊಡ್ಡ ದುರಂತವೊಂದು ತಪ್ಪಿದೆ.
ಮಾಹಿತಿ ಪ್ರಕಾರ, ಕೊಥ್ರುಡ್ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚವಾಣ್ ರಜೆಯ ಮೇಲೆ ಮನೆಯಲ್ಲಿದ್ದಾಗ ಹೊರಗೆ ಗದ್ದಲ ಕೇಳಿಸಿದೆ. ಮಂಗಳವಾರ ಬೆಳಿಗ್ಗೆ 9.06ರ ಸುಮಾರಿಗೆ, ಸೋನಾವಾನೆ ಕಟ್ಟಡದ ಬಳಿ ನೆರೆಮನೆಯ ಉಮೇಶ್ ಸುತಾರ್ ಎಂಬುವವರು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಗಮನಿಸಿದ್ದಾರೆ. ಏನೆಂದು ನೋಡಲು ಚವಾಣ್ ತಮ್ಮ ಗ್ಯಾಲರಿಗೆ ಹೋದಾಗ, ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ಮಲಗುವ ಕೋಣೆಯ ಕಿಟಕಿಯಿಂದ ಮಗುವೊಂದು ಅಪಾಯಕಾರಿಯಾಗಿ ನೇತಾಡುತ್ತಿರುವುದನ್ನು ನೋಡಿದ್ದಾರೆ.
ಕೂಡಲೇ ಚವಾಣ್ ಅವರು ಆ ಕಟ್ಟಡದತ್ತ ಧಾವಿಸಿದ್ದಾರೆ. ಆ ಮಹಡಿ ತಲುಪಿದಾಗ, ಬಾಗಿಲು ಲಾಕ್ ಆಗಿರುವುದನ್ನು ಮತ್ತು ಬಾಲಕಿ ಒಬ್ಬಳೇ ಒಳಗೆ ಇರುವುದನ್ನು ಗಮನಿಸಿದ್ದಾರೆ. ಬಾಲಕಿಯ ತಾಯಿ ಸ್ವಲ್ಪ ಸಮಯದ ಮುನ್ನ ತನ್ನ ಇನ್ನೊಂದು ಮಗುವನ್ನು ಶಾಲೆಗೆ ಬಿಡಲು ಹೋಗಿರುವುದು ತಿಳಿದುಬಂದಿದೆ.
ಅಷ್ಟೊತ್ತಿಗಾಗಲೇ ಆ ಬಾಲಕಿಯ ತಾಯಿ ಕೂಡ ಬಂದಿದ್ದಾರೆ. ಅವರಿಂದ ಮನೆಯ ಬೀಗ ತೆಗೆದ ಕೂಡಲೇ ಚವಾಣ್ ಅವರು ಬೇಗನೆ ಅಪಾರ್ಟ್ಮೆಂಟ್ ಪ್ರವೇಶಿಸಿದ್ದಾರೆ ಮತ್ತು ಜಾರಿಬೀಳುವ ಮೊದಲು ಮಗುವನ್ನು ಸುರಕ್ಷಿತವಾಗಿ ಮೇಲೆಳೆದುಕೊಂಡಿದ್ದಾರೆ.
'ನಾನು ಕರ್ತವ್ಯದಲ್ಲಿದ್ದರೂ ಅಥವಾ ಇಲ್ಲದಿದ್ದರೂ ಇದು ನನ್ನ ಕೆಲಸ. ಜೀವಗಳನ್ನು ಉಳಿಸುವುದು ನನ್ನ ಪ್ರಮುಖ ಗುರಿಯಾಗಿದೆ' ಎಂದು ಚವಾಣ್ ರಕ್ಷಣಾ ಕಾರ್ಯಾಚರಣೆಯ ನಂತರ ಹೇಳಿದರು.