ಮಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಅವರು, ಮುಂಬೈನ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ ಸಿಬ್ಬಂದಿಯೋರ್ವನಿಗೆ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಮಂಗಳವಾರ ರಾತ್ರಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿಸ ಗಾಯಕ್ವಾಡ್ ಅವರು ಕ್ಯಾಂಟೀನ್‌ಗೆ ನುಗ್ಗಿ, ವ್ಯವಸ್ಥಾಪಕರನ್ನು ಗದರಿರುವುದು, ಹಳಸಿದ ಆಹಾರ ನೀಡಿದ್ದಾರೆಂದು ಬಿಲ್ಲಿಂಗ್ ಕೌಂಟರ್‌ನಲ್ಲಿ ಕುಳಿತಿದ್ದ ಸಿಬ್ಬಂದಿಗೆ ಥಳಿಸುತ್ತಿರುವುದು ಕಂಡು ಬಂದಿದೆ.
ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಕುರಿತು ಹಲವು ಟೀಕೆಗಳು ವ್ಯಕ್ತವಾಗಿದೆ.
ಈ ನಡುವೆ ತಮ್ಮ ಕ್ರಮವನ್ನು ಶಾಸಕ ಸಮರ್ಥಿಸಿಕೊಂಡಿದ್ದು, ಗುಣಮಟ್ಟದ ಆಹಾರದ ಬಗ್ಗೆ ಪದೇ ಪದೇ ದೂರು ನೀಡಲಾಗಿದೆ. ಈ ಬಾರಿ ಮೌನವಾಗಿರಲು ಸಾಧ್ಯವಾಗಿರಲಿಲ್ಲ. ಈ ವಿಚಾರವನ್ನು ಸದನದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.
ಗಾಯಕವಾಡ್ ಅವರ ಈ ರೀತಿಯ ವರ್ತನೆ ಕಂಡು ಬಂದಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಫೆಬ್ರವರಿಯಲ್ಲಿ, ಮತ್ತೊಂದು ವೀಡಿಯೋ ವೈರಲ್ ಆಗಿತ್ತು.
ಶಿವ ಜಯಂತಿ ಆಚರಣೆಯ ಸಂದರ್ಭದಲ್ಲಿ ಯುವಕರ ಗುಂಪೊಂನ್ನು ಥಳಿಸಲು ಪೊಲೀಸರ ಲಾಠಿ ಬಳಸಿದ್ದರು. ಇದಲ್ಲದೆ, ಮಹಿಳೆಯರಿಗೆ ಬೆದರಿಕೆ ಹಾಕಿದ್ದ ಆರೋಪ ಕೂಡ ಕೇಳಿ ಬಂದಿತ್ತು.