ನವದೆಹಲಿ: ಬಾಂಗ್ಲಾದೇಶ, ಜಪಾನ್ ಸೇರಿದಂತೆ 14 ರಾಷ್ಟ್ರಗಳ ಮೇಲೆ ಆಮೆರಿಕಾ ಅಧ್ಯಕ್ಷ ಟ್ರಂಪ್ ತೆರಿಗೆ ಯುದ್ಧವನ್ನು ಸಾರಿದ್ದು, ಈ ನಡುವಲ್ಲೆ ಭಾರತ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತು ಕುತೂಹಲಗಳು ಹೆಚ್ಚಾಗಿವೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಆಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಭಾರತ ಜೊತೆಗೂ ಸದಸ್ಯದಲ್ಲೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಿದ್ದೇವೆಂದು ಹೇಳಿದ್ದರು.
ಭಾರತದ ಜೊತೆಗೆ ವ್ಯಾಪಾರ ಒಪ್ಪಂದ ಸದ್ಯದಲ್ಲೇ ಅಂತಿಮಗೊಳ್ಳುವ ನಿರೀಕ್ಷೆಯಿದೆ. ಇತರ ದೇಶಗಳ ಜೊತೆಗೆ ನಾವು ಮಾತುಕತೆ ನಡೆಸಿದರೂ ಯಾವುದೇ ಒಪ್ಪಂದ ಆಗಲಿದೆ ಎಂದು ಅನಿಸುತ್ತಿಲ್ಲ. ಹೀಗಾಗಿ ನಾವು ಪತ್ರ ಬರೆದಿದ್ದು, ಒಂದು ವೇಳೆ ನೀವು ಆಟವಾಡುವುದೇ ಆಗಿದ್ದರೆ ಅದಕ್ಕೆ ತಕ್ಕ ಬೆಲೆಯನ್ನೂ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ಸೋಮವಾರವಷ್ಟೇ ಟ್ರಂಪ್ ಸರ್ಕಾರ ಜಪಾನ್ ಸೇರಿ 14 ರಾಷ್ಟ್ರಗಳಿಗೆ ಪತ್ರ ಬರೆದು, ಶೇ.20ರಿಂದ ಶೇ.40ರಷ್ಟು ಹೆಚ್ಚಿವರು ಪ್ರತಿ ತೆರಿಗೆ ಹಾಕುವ ಬೆದರಿಕೆ ಹಾಕಿತ್ತು.
ಏ.2ರಂದು ಭಾರತದ ಮೇಲೆ ಅಮೆರಿಕಾ ಪ್ರತಿ ತೆರಿಗೆ ಹೇರಿದ್ದು, ಬಳಿಕ ಅದರ ಜಾರಿಯನ್ನು ಜು.9ರವರೆಗೆ ತಡೆ ಹಿಡಿದಿತ್ತು. ಈ ನಡುವೆ ಕಳೆದ ವಾರವಷ್ಟೇ ಸಚಿವ ಪಿಯೂಷ್ ಗೋಯಲ್ ಅವರು ಭಾರತವು ಯಾವುದೇ ವ್ಯಾಪಾರ ಒಪ್ಪಂದವನ್ನು ಗಡುವಿನ ಆಧಾರದಲ್ಲಿ ಮಾಡಿಕೊಳ್ಳುವುದಿಲ್ಲ. ಭಾರತದ ಹಿತಾಸಕ್ತಿ ನೋಡಿ ಅಮೆರಿಕಾ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆಂದು ಹೇಳಿದ್ದರು.
ಈ ನಡುವೆ ಅಮೆರಿಕಾ ಜೊತೆಗಿನ ವ್ಯಾಪಾರ ಒಪ್ಪಂದ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರದ ಅಧಿಕಾರಿಗಳು, ಅಮೆರಿಕಾದೊಂದಿಗೆ ಮಾತುಕತೆ ಪೂರ್ಣಗೊಂಡಿದ್ದು, ಪ್ರಸ್ತುತ ಚೆಂಡು ಅಮೆರಿಕಾದ ಅಂಗಳದಲ್ಲಿದೆ. ನಿರ್ಧಾರ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.
ಇದೇ ವೇಳೆ ಅಮೆರಿಕ ಘೋಷಿಸಿದ ವಿಯೆಟ್ನಾಂ ವ್ಯಾಪಾರ ಒಪ್ಪಂದವನ್ನು ಉಲ್ಲೇಖಿಸಿ ಮಾತನಾಡಿದ ಅವರು, ಟ್ರಂಪ್ ಏಕಪಕ್ಷೀಯವಾಗಿ ಬಹಳಷ್ಟು ಘೋಷಣೆಗಳನ್ನು ಮಾಡುತ್ತಿದ್ದಾರೆ, ಅದನ್ನು ಇತರ ದೇಶಗಳು ನಿರಾಕರಿಸುತ್ತವೆ ಎಂದು ತಿಳಿಸಿದ್ದಾರೆ.
ಜುಲೈ 9 ರೊಳಗೆ ಸೀಮಿತ ಒಪ್ಪಂದಕ್ಕೆ ಸಹಿ ಹಾಕುವ ವಿಶ್ವಾಸದಲ್ಲಿ ಭಾರತ ಇತ್ತು, ಆದರೆ ಅಮೆರಿಕ ಆಗಸ್ಟ್ 1 ರ ಹೊಸ ಗಡುವನ್ನು ನೀಡಿರುವುದರಿಂದ ಒಪ್ಪಂದ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.