ಮುಂಬೈ: ಮಹಾರಾಷ್ಟ್ರದಲ್ಲಿ ಹಿಂದಿ-ಮರಾಠಿ ಭಾಷಾ ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, 'ಅವರು ಮರಾಠಿ ಮಾತನಾಡದ "ಬಡ ಜನರನ್ನು" ಮಾತ್ರ ಹೊಡೆಯುತ್ತಾರೆ ಎಂದು ಗುರುವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಶಿಕಾಂತ್ ದುಬೆ, "ನೀವು ಬಡವರನ್ನು ಹೊಡೆಯುತ್ತೀರಿ. ಆದರೆ ಮುಖೇಶ್ ಅಂಬಾನಿ ಮುಂಬೈನಲ್ಲಿ ವಾಸಿಸುತ್ತಿದ್ದರೂ ಅವರು ಮರಾಠಿ ಮಾತನಾಡುವುದು ತುಂಬಾ ಕಡಿಮೆ. ನಿಮಗೆ ಧೈರ್ಯವಿದ್ದರೆ ಅವರ ಬಳಿಗೆ ಹೋಗಿ, ಅವರ ಮೇಲೆ ಹಲ್ಲೆಗೆ ಯತ್ನಿಸಿ. ಮಹಿಮ್ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ನಿಮಗೆ ಧೈರ್ಯವಿದ್ದರೆ, ಅಲ್ಲಿಗೆ ಹೋಗಿ. ಎಸ್‌ಬಿಐ ಅಧ್ಯಕ್ಷರು ಮರಾಠಿ ಮಾತನಾಡುವುದಿಲ್ಲ, ಅವರನ್ನು ಹೊಡೆಯಲು ಯತ್ನಿಸಿ" ಎಂದು ಸವಾಲು ಹಾಕಿದರು.
ಮಹಾರಾಷ್ಟ್ರದ ಆರ್ಥಿಕತೆಯ ಬಗ್ಗೆ ತಮ್ಮ ಹಿಂದಿನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಿಶಿಕಾಂತ್ ದುಬೆ ಸ್ಪಷ್ಟಪಡಿಸಿದರು. "ನಾನು ಹೇಳಿದ್ದು ಈ ದೇಶದ ಆರ್ಥಿಕತೆಯಲ್ಲಿ ಮಹಾರಾಷ್ಟ್ರವು ದೊಡ್ಡ ಕೊಡುಗೆ ನೀಡುತ್ತಿದೆ... ನಾನು ಹೇಳಿದ್ದನ್ನು ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ ನಾನು ಹೇಳುತ್ತಿರುವುದು ಮುಂಬೈ ಅಥವಾ ಮಹಾರಾಷ್ಟ್ರ ಪಾವತಿಸುವ ತೆರಿಗೆಯಲ್ಲಿ ನಮ್ಮದೂ ಕೊಡುಗೆ ಇದೆ. ಇದಕ್ಕೂ ಠಾಕ್ರೆ ಕುಟುಂಬ ಅಥವಾ ಮರಾಠಾರಿಗೂ ಯಾವುದೇ ಸಂಬಂಧವಿಲ್ಲ. ತೆರಿಗೆ ಪಾವತಿಸುವ ಎಸ್‌ಬಿಐ ಮತ್ತು ಎಲ್‌ಐಸಿ ತಮ್ಮ ಪ್ರಧಾನ ಕಚೇರಿಯನ್ನು ಮುಂಬೈನಲ್ಲಿ ಹೊಂದಿವೆ" ಎಂದು ಅವರು ಹೇಳಿದರು.
ಮರಾಠಿಯಲ್ಲಿ ಮಾತನಾಡಲು ಇಷ್ಟಪಡದ ವ್ಯಕ್ತಿಗಳನ್ನು ಉಲ್ಲೇಖಿಸಿ ರಾಜ್ ಠಾಕ್ರೆ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ "ಹೊಡೆಯಿರಿ, ಆದರೆ ವೀಡಿಯೊ ಮಾಡಬೇಡಿ" ಎಂದು ಹೇಳಿರುವುದಾಗಿ ವರದಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ದುಬೆ, "ನೀವು ಏನು ಮಾಡುತ್ತಿದ್ದೀರಿ, ಯಾರ ಅನ್ನ ತಿನ್ನುತ್ತಿದ್ದೀರಿ? ನೀವು ನಮ್ಮ ಹಣದಿಂದ ಬದುಕುತ್ತಿದ್ದೀರಿ. ನಿಮ್ಮಲ್ಲಿ ಯಾವ ರೀತಿಯ ಕೈಗಾರಿಕೆಗಳಿವೆ? ಜಾರ್ಖಂಡ್, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾದಲ್ಲಿ ನಮಗೆ ಎಲ್ಲಾ ಗಣಿಗಳಿವೆ. ನಿಮ್ಮಲ್ಲಿ ಯಾವ ಗಣಿಗಳಿವೆ? ಎಲ್ಲಾ ಸೆಮಿಕಂಡಕ್ಟರ್ ಸಂಸ್ಕರಣಾಗಾರಗಳು ಗುಜರಾತ್‌ನಲ್ಲಿವೆ" ಎಂದು ತಿರುಗೇಟು ನೀಡಿದರು.
ಹಿಂದಿ ಮಾತನಾಡುವ ಜನರ ವಿರುದ್ಧದ ಆಕ್ರಮಣದ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ ದುಬೆ, "ನಿಮಗೆ ಧೈರ್ಯವಿದ್ದರೆ, ಉರ್ದು, ತಮಿಳು ಮತ್ತು ತೆಲುಗು ಮಾತನಾಡುವವರ ಮೇಲೂ ದಾಳಿ ಮಾಡಿ. ನೀವು ಅಂತಹ 'ಬಾಸ್' ಆಗಿದ್ದರೆ, ಮಹಾರಾಷ್ಟ್ರದಿಂದ ಹೊರಗೆ ಬನ್ನಿ - ಬಿಹಾರ, ಉತ್ತರ ಪ್ರದೇಶ, ತಮಿಳುನಾಡಿಗೆ ಬನ್ನಿ ಎಂದು ದುಬೆ ಸವಾಲು ಹಾಕಿದ್ದರು.