ತಿರುಪತಿ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲ ದೇಗುಲ (Tirumala Tirupati Devasthanams-TTD)ದಲ್ಲಿ ಕಾರ್ಯನಿರ್ವಹಿಸುತ್ತಲೇ ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಆರೋಪದ ಮೇರೆಗೆ ಟಿಟಿಡಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಹೌದು.. ಟಿಟಿಡಿ ಉದ್ಯೋಗಿಯಾಗಿ ಕೆಲಸ ಮಾಡುತ್ತಾ ಚರ್ಚ್‌ಗೆ ಹೋದ ಆರೋಪದ ಮೇಲೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಎಇಒ) ರಾಜಶೇಖರ್ ಬಾಬು ಅವರನ್ನು ಟಿಟಿಡಿ ಅಮಾನತುಗೊಳಿಸಿದೆ.
ಮೂಲಗಳ ಪ್ರಕಾರ ಟಿಟಿಡಿ ಹರಾಜು ವಿಭಾಗದಲ್ಲಿ ಎಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜಶೇಖರ್ ಬಾಬು ಪ್ರತಿ ಭಾನುವಾರ ತಮ್ಮ ಊರಾದ ಪುತ್ತೂರಿನಲ್ಲಿರುವ ಚರ್ಚ್‌ಗೆ ಹೋಗಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಕುರಿತು ವ್ಯಕ್ತಿಯೊಬ್ಬರು ವೀಡಿಯೊಗಳು ಮತ್ತು ಫೋಟೋಗಳ ಜೊತೆಗೆ ಟಿಟಿಡಿಗೆ ದೂರು ನೀಡಿದ್ದರು.
ಈ ವಿಚಾರ ಆಂಧ್ರ ಪ್ರದೇಶದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಖ್ಯಾತ ಹಿಂದೂಪರ ಚಿಂತಕ ರಾಧಾಮನೋಹರ್ ದಾಸ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, 'ಟಿಟಿಡಿಯಲ್ಲಿ ಕೆಲಸ ಮಾಡುವ ನೌಕರರು ವೆಂಕಟೇಶ್ವರ ಸ್ವಾಮಿಯ ಹಣವನ್ನು ತಿಂದು ಹುಂಡಿಯಲ್ಲಿ ಉಡುಗೊರೆಗಳನ್ನು ನೀಡಿದರೆ... ಸಂಬಳ ಪಡೆಯುತ್ತಾ ಚರ್ಚ್‌ಗಳಿಗೆ ಹೋಗುವ ನೌಕರರು ಚರ್ಚ್‌ಗಳನ್ನು ತೊರೆಯಬೇಕು, ಇಲ್ಲದಿದ್ದರೆ ಅವರು ಟಿಟಿಡಿಯನ್ನು ತೊರೆಯಬೇಕು ಎಂದು ಕಿಡಿಕಾರಿದ್ದರು.
ಬಳಿಕ ಈ ವಿಚಾರ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.
ಕೊನೆಗೂ ಟಿಟಿಡಿ ಕ್ರಮ, ಅಧಿಕಾರಿ ಅಮಾನತು
ಇನ್ನು ಈ ವಿಚಾರ ವೈರಲ್ ಆಗುತ್ತಲೇ ಎಚ್ಚೆತ್ತ ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ಈ ಸಂಬಂಧ ತನಿಖೆ ನಡೆಸಿ ರಾಜಶೇಖರ್ ಬಾಬು ಚರ್ಚ್‌ಗೆ ಹೋಗುವುದನ್ನು ಸ್ಪಷ್ಟಪಡಿಸಿಕೊಂಡು ವರದಿ ನೀಡಿದ್ದಾರೆ. ಈ ವರದಿಯನ್ನಾಧರಿಸಿ ಟಿಟಿಡಿ ಅಧಿಕಾರಿಯನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.
"ರಾಜಶೇಖರ ಬಾಬು ಟಿಟಿಡಿಯ ಉದ್ಯೋಗಿಯಾಗಿ ಕಂಪನಿಯ ನೀತಿ ಸಂಹಿತೆಯನ್ನು ಪಾಲಿಸಿಲ್ಲ. ಹಿಂದೂ ಧಾರ್ಮಿಕ ಸಂಘಟನೆಯನ್ನು ಪ್ರತಿನಿಧಿಸುವ ಉದ್ಯೋಗಿಯಾಗಿ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಟಿಟಿಡಿ ವಿಜಿಲೆನ್ಸ್ ವರದಿ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸಿದ ನಂತರ, ನಾವು ಅವರನ್ನು ಅಮಾನತುಗೊಳಿಸುತ್ತಿದ್ದೇವೆ ಮತ್ತು ಅವರ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳುತ್ತಿದ್ದೇವೆ" ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿಯಲ್ಲಿ, ವಿಶೇಷವಾಗಿ ಅದರ ಆಡಳಿತದಲ್ಲಿರುವ ಮತ್ತು ನಿರ್ವಹಿಸಲ್ಪಡುವ ದೇವಾಲಯಗಳಲ್ಲಿ ಹಿಂದೂಯೇತರರು ಕೆಲಸ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಮಂಡಳಿಯ ನಿಲುವಿಗೆ ಇದು ಅನುಗುಣವಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.
ಯಾವ ಧರ್ಮ ಅನುಸರಿಸುತ್ತೇನೆ ಎಂಬುದು ಮುಖ್ಯವಲ್ಲ.. ಎಂದ ಅಧಿಕಾರಿ
ಇನ್ನು ಟಿಟಿಡಿಯಲ್ಲಿ ಕೆಲಸ ಮಾಡುತ್ತಲೇ ಚರ್ಚ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಅಧಿಕಾರಿ ರಾಜಶೇಖರ್, ನಾನು ಯಾವ ಧರ್ಮವನ್ನು ಅನುಸರಿಸುತ್ತೇನೆ ಎಂಬುದು ಮುಖ್ಯವಲ್ಲ. ನನ್ನ ಕೆಲಸ ಮಾತ್ರ ಮುಖ್ಯ ಎಂದು ಹೇಳಿದ್ದಾರೆ.
'ನಾನು ನನ್ನ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದೆ. ಟಿಟಿಡಿಯ ಸಂಪ್ರದಾಯಗಳನ್ನು ಯಾವಾಗಲೂ ಎತ್ತಿಹಿಡಿಯುತ್ತಿದ್ದೆ. ಟಿಟಿಡಿ ಹಿರಿಯ ಸದಸ್ಯರಾಗಿ, ಯಾರಾದರೂ ನನ್ನನ್ನು ದೇವಸ್ಥಾನ ಅಥವಾ ಚರ್ಚ್‌ಗೆ ಆಹ್ವಾನಿಸಿದರೆ, ನಾನು ಅಲ್ಲಿಗೆ ಹೋಗುತ್ತಿದ್ದೆ. ನಾನು ಯಾವ ನಂಬಿಕೆ ಅಥವಾ ಧರ್ಮವನ್ನು ಅನುಸರಿಸುತ್ತೇನೆ ಎಂಬುದು ಮುಖ್ಯವಲ್ಲ. ಟಿಟಿಡಿ ನಿಯಮಗಳಿಗೆ ಬದ್ಧವಾಗಿರಲು ನಾನು ಯಾವಾಗಲೂ ನನ್ನ ಕೈಲಾದಷ್ಟು ಪ್ರಯತ್ನಿಸಿದೆ" ಎಂದು ಸ್ಪಷ್ಟಪಡಿಸಿದ್ದಾರೆ.