ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಸಾಲಬಾಧೆಯಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ತಮ್ಮ ಮಧುಮೇಹಿ ಮಗಳಿಗೆ ಇನ್ಸುಲಿನ್ ಇಂಜೆಕ್ಷನ್ ನೀಡಲು ಹಣ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಹತಾಶ ವೀಡಿಯೊ ಮಾಡಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಶಹಬಾಜ್ ಶಕೀಲ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ಅದರಲ್ಲಿ ತಮ್ಮ ನೋವೆಲ್ಲಾ ಹಂಚಿಕೊಂಡು, ಬಳಿಕ ಸೆಕ್ಯುರಿಟಿ ಗಾರ್ಡ್ ಬಳಿ ಇದ್ದ ಗನ್ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಮಗಳು ಮಧುಮೇಹದಿಂದ ಬಳಲುತ್ತಿದ್ದಾಳೆ, ಆಕೆಗೆ ಇನ್ಸುಲಿನ್ ಖರೀದಿ ಮಾಡಲು ನನ್ನ ಬಳಿ ಹಣವಿಲ್ಲ ಎಂದು ಅಸಹಾಯಕ ತಂದೆ ಕಣ್ಣೀರಿಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋಟಿಗಟ್ಟಲೆ ಸಾಲ ಮಾಡಿದ್ದು, ಅವರ ಆರ್ಥಿಕ ಪರಿ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಸೆಕ್ಯುರಿಟಿ ಬಳಿ ಇದ್ದ ಗನ್ ಇವರ ಬಳಿ ಬಂದಿದ್ದು ಹೇಗೆ ಎಂಬುದು ಇನ್ನೂ ಪ್ರಶ್ನಾತೀತವಾಗಿದೆ.
ಫೇಸ್‌ಬುಕ್ ಲೈವ್ ನೋಡಿದ ಅವರ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ತಲುಪುವ ಹೊತ್ತಿಗೆ, ಅವರು ಈಗಾಗಲೇ ಗುಂಡು ಹಾರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.