ಪಾಟ್ನಾ: ಬಿಹಾರದಲ್ಲಿ ಗುಂಡಿನ ದಾಳಿ ಪ್ರಕರಣಗಳು ಮುಂದುವರೆದಿದೆ. ಶನಿವಾರ ರಾತ್ರಿ ಮತ್ತೋರ್ವ ಬಿಜೆಪಿ ನಾಯಕ ಸುರೇಂದರ್ ಕೇವತ್ (52) ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪಾಟ್ನಾ ಜಿಲ್ಲೆಯ ಪನ್‌ಪುನ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಾಲ್ಕು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಕೂಡಲೇ ಆತನನ್ನು ಕುಟುಂಬಸ್ಥರು ಪಾಟ್ನಾದ AIIMS ಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟು ಹೊತ್ತಿಗೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪಿಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖ್‌ಪುರ ಗ್ರಾಮದ ನಿವಾಸಿ ಕೇವತ್, ಪನ್‌ಪುನ್‌ನ ಮಾಜಿ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷರಾಗಿದ್ದರು.
ಕೃಷಿ ಭೂಮಿಯಿಂದ ಮನೆ ಕಡೆಗೆ ಹೊರಟ್ಟಿದ್ದ ಕೇವತ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಟ್ನಾದಲ್ಲಿ ನಡೆದ ಇತ್ತೀಚಿನ ಕೊಲೆಗಳು ಬಿಹಾರದಲ್ಲಿ ಹೆಚ್ಚುತ್ತಿರುವ ಅಪರಾಧದ ಮತ್ತೊಂದು ನಿದರ್ಶನವಾಗಿದೆ.
ಕಳೆದ ವಾರ ಖ್ಯಾತ ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಹೃದಯಭಾಗದಲ್ಲಿರುವ ಅವರ ಕಟ್ಟಡದ ಗೇಟ್ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶುಕ್ರವಾರ ಮಿನಿ ಮಾರ್ಟ್ ಮಾಲೀಕ ವಿಕ್ರಮ್ ಝಾ ಅವರನ್ನು ಪಾಟ್ನಾದ ರಾಮ್ ಕೃಷ್ಣ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.ಶನಿವಾರ ಸಂಜೆ ಪಾಟ್ನಾದ ಐಷಾರಾಮಿ ಪ್ರದೇಶದಲ್ಲಿರುವ ಕಂಕರ್‌ಬಾಗ್ ಉದ್ಯಾನವನದಲ್ಲಿ ಕೆಲವರು ಗುಂಡಿನ ದಾಳಿ ನಡೆಸಿದ್ದು, ಆತಂಕ ಸೃಷ್ಟಿಸಿದೆ.
ಗುರುವಾರ ಮರಳು ದಂಧೆಕೋರ ರಮಾಕಾಂತ್ ಯಾದವ್ ಅವರನ್ನು ಪಾಟ್ನಾದ ರಾಣಿತಲಾಬ್ ಪೊಲೀಸ್ ಠಾಣೆ ವ್ಯಾಪ್ತಿಯ ಅವರ ಮನೆಯ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಶನಿವಾರದಂದು ಸಿತಾಮರ್ಹಿ ಜಿಲ್ಲೆಯಲ್ಲಿ ಆಸ್ತಿ ಡೀಲರ್ ವಾಸಿಂ ಅನ್ವರ್ ಅವರನ್ನು ಗುಂಡಿಕ್ಕಿ ಕೊಂದಿದ್ದರು ಮತ್ತು ಅರ್ವಾಲ್ ಜಿಲ್ಲೆಯಲ್ಲಿ 22 ವರ್ಷದ ಯುವಕನನ್ನು ಹೊಡೆದು ಹತ್ಯೆ ಮಾಡಲಾಗಿತ್ತು.