ಭುವನೇಶ್ವರ: ಫಕೀರ್ ಮೋಹನ್ ಕಾಲೇಜಿನ 20 ವರ್ಷದ ವಿದ್ಯಾರ್ಥಿನಿ ಸೌಮ್ಯಶ್ರೀ ಭುವನೇಶ್ವರದ ಏಮ್ಸ್‌ನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ವಿಭಾಗದ ಮುಖ್ಯಸ್ಥರ ಕಿರುಕುಳದಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಘಾತಕಾರಿ ಸಂಗತಿಯೆಂದರೆ ಆಂತರಿಕ ದೂರು ಸಮಿತಿಗೆ ಸಲ್ಲಿಸಿದ್ದ ದೂರನ್ನು ಹಿಂಪಡೆಯಲು ಕಾಲೇಜು ಸಿಬ್ಬಂದಿ ತನ್ನ ಮೇಲೆ ಒತ್ತಡ ಹೇರಿದ್ದರು ಎಂದು ಆಕೆಯ ತಂದೆ ಹೇಳಿದ್ದಾರೆ.
"ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಕೆಲವೇ ನಿಮಿಷಗಳ ಮೊದಲು ಕಾಲೇಜು ಪ್ರಾಂಶುಪಾಲರು ಆಕೆಯನ್ನು ಭೇಟಿಯಾಗಿದ್ದರು ಎಂದು ಆಕೆಯ ಸ್ನೇಹಿತರು ನನಗೆ ಮಾಹಿತಿ ನೀಡಿದ್ದಾರೆ. ಆಂತರಿಕ ದೂರು ಸಮಿತಿಗೆ ದೂರಿನ ಬಗ್ಗೆ ಪುರಾವೆಗಳು ಸಿಕ್ಕಿದ್ದವು. ಹೀಗಾಗಿ ದೂರನ್ನು ಹಿಂಪಡೆಯಲು ಅಥವಾ ಇಲ್ಲದಿದ್ದರೆ ನನ್ನ ಮಗಳನ್ನು ಕಾಲೇಜಿನಿಂದ ಹೊರಹಾಕುವುದಾಗಿ ಹೆದರಿಸಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಐಸಿಸಿ ಮುಖ್ಯಸ್ಥ ಸಮೀರ್ ಸಾಹು ವಿರುದ್ಧ ಆಕೆ ದೂರು ನೀಡಿದ ನಂತರ, ಅವರು ಕೆಲವು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ತಾನು ಮಾಡಿದ್ದ ಎಲ್ಲಾ ಆರೋಪಗಳು ನಕಲಿ ಎಂದು ಹೇಳಲು ಪ್ರಾರಂಭಿಸಿದರು. ಇದರಿಂದಾಗಿ ಆಕೆ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಳು ಎಂದು ಅವರು ಹೇಳಿದರು.
ನನ್ನ ಮಗಳು ಒಂದು ದಿನ ಹಿಂದೆ ಪ್ರಾಂಶುಪಾಲ ದಿಲ್ಲಿಪ್ ಘೋಷ್ ಅವರನ್ನು ಭೇಟಿಯಾಗಲು ಹೋದಾಗ ಅವರು ಯಾವುದೇ ಸಾಂತ್ವನವನ್ನೂ ಹೇಳಲಿಲ್ಲ. ಅದಕ್ಕಾಗಿ ಅವಳು ಆತ್ಮಹತ್ಯೆಯಂತ ಕಠಿಣ ನಿರ್ಧಾರ ತೆಗೆದುಕೊಂಡಳು ಎಂದು ಅವರು ಹೇಳಿದರು. ಸಾಹು ತನ್ನ ಬೇಡಿಕೆಗಳಿಗೆ ಒಪ್ಪದಿದ್ದರೆ ಪರೀಕ್ಷೆಗಳಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.
ಇಂಟಿಗ್ರೇಟೆಡ್ ಬಿಇಡಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿರುವ ಬಾಲಕಿ ನಿನ್ನೆ ಮಧ್ಯಾಹ್ನ 12.30ರ ನಂತರ ಕಾಲೇಜಿನ ಆವರಣದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ತಕ್ಷಣ ರಾಜಧಾನಿಯ ಏಮ್ಸ್‌ಗೆ ಕರೆದೊಯ್ಯಲಾಗಿದ್ದು ಆಕೆಯ ಸ್ಥಿತಿ ಗಂಭೀರವಾಗಿದೆ. ಏತನ್ಮಧ್ಯೆ, ಉನ್ನತ ಶಿಕ್ಷಣ ನಿರ್ದೇಶಕರು, ಜಂಟಿ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾರಿ ಮತ್ತು ಹಿರಿಯ ಶಿಕ್ಷಣ ತಜ್ಞರು, ಇಬ್ಬರೂ ಮಹಿಳೆಯರ ನೇತೃತ್ವದ ಸಮಿತಿ ಭಾನುವಾರ ಎಫ್‌ಎಂ ಕಾಲೇಜಿಗೆ ಭೇಟಿ ನೀಡಿ ಘಟನೆಯ ಬಗ್ಗೆ ತನಿಖೆ ಆರಂಭಿಸಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಪ್ರಾಂಶುಪಾಲರು ಮತ್ತು ಐಸಿಸಿ ಸದಸ್ಯರನ್ನು ಪ್ರಶ್ನಿಸಿದರು.