ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್ ಕುರಿತು ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಇಂದೋರ್ ಮೂಲದ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರನ್ನು ಸೋಮವಾರ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಅವರ ನಡವಳಿಕೆಯು ಪ್ರಚೋದನಕಾರಿ ಮತ್ತು ಅಪಕ್ವವಾಗಿದೆ ಎಂದು ಗಮನಿಸಿದ ನಂತರ, ಈ ಪೋಸ್ಟ್‌ಗಳನ್ನು ಡಿಲೀಟ್ ಮಾಡಲು ಕಾರ್ಟೂನಿಸ್ಟ್ ಒಪ್ಪಿಕೊಂಡರು.
ಸೋಮವಾರ ನಡೆದ ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ನ್ಯಾಯಮೂರ್ತಿ ಅರವಿಂದ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ವ್ಯಂಗ್ಯಚಿತ್ರಕಾರರ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಮಾಳವೀಯ ಅವರ ನಡವಳಿಕೆಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅರ್ಜಿದಾರರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿತು. ಅದಕ್ಕೆ ಅವರ ಪರ ವಕೀಲೆ ವೃಂದಾ ಗ್ರೋವರ್ ಅವರು ಒಪ್ಪಿಗೆ ಸೂಚಿಸಿದರು.
ನಿರೀಕ್ಷಣಾ ಜಾಮೀನು ಕೋರಿ ಹೇಮಂತ್ ಮಾಳವೀಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಅವರಲ್ಲಿ ಇನ್ನೂ ಪ್ರಬುದ್ಧತೆ ಬಂದಿಲ್ಲ. ಇದು ನಿಜಕ್ಕೂ ಉದ್ರಿಕ್ತವಾಗಿದೆ. ವಾಕ್ ಸ್ವಾತಂತ್ರ್ಯವನ್ನು ಈ ವ್ಯಂಗ್ಯಚಿತ್ರಕಾರರು, ಸ್ಟ್ಯಾಂಡ್-ಅಪ್ ಹಾಸ್ಯನಟರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಕಿಡಿ ಕಾರಿತು.
ಹೇಮಂತ್ ಮಾಳವೀಯ ಅವರನ್ನು ಬಂಧಿಸದಂತೆ ಯಾವುದೇ ಮಧ್ಯಂತರ ಆದೇಶವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿಯ ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿದೆ.
ಇಂದೋರ್‌ನ ಸೆಷನ್ಸ್ ನ್ಯಾಯಾಲಯವು ಮೇ 24 ರಂದು ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಜುಲೈ 3ರಂದು ಮಧ್ಯಪ್ರದೇಶದ ಹೈಕೋರ್ಟ್ ಹೇಮಂತ್ ಮಾಳವೀಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.