ಮುಂಬೈ: ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಆಕಾಶ ಏರ್ ವಿಮಾನದ ರೆಕ್ಕೆಗೆ ಬರ್ಡ್ ಗ್ರೂಪ್‌ನ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ.
ಆದಾಗ್ಯೂ, ಇಂದು ಬೆಳಗ್ಗೆ ವಿಮಾನಯಾನ ಸಂಸ್ಥೆಯ QP-1736 ವಿಮಾನ ಬೆಂಗಳೂರಿನಿಂದ ಮುಂಬೈ ಆಗಮಿಸಿ, ಸಾಮಾನುಗಳು ಮತ್ತು ಸರಕುಗಳನ್ನು ಇಳಿಸಿದ ನಂತರ ನಡೆದ ಈ ಘಟನೆಯಲ್ಲಿ ಪ್ರಯಾಣಿಕರು ಅಥವಾ ಉದ್ಯೋಗಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಸರಕು ಟ್ರಕ್‌ನ ಚಾಲಕ ಬೋಯಿಂಗ್ 737-ಮ್ಯಾಕ್ಸ್ ವಿಮಾನದ ರೆಕ್ಕೆಯ ಎತ್ತರವನ್ನು ತಪ್ಪಾಗಿ ನಿರ್ಣಯಿಸಿದ್ದರಿಂದ ವಾಹನವು ವಿಮಾನದ ರೆಕ್ಕೆಗೆ ತಗುಲಿದೆ.
"ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಆಕಾಶ ಏರ್ ವಿಮಾನದ ರೆಕ್ಕೆಗೆ ಸರಕು ಟ್ರಕ್ ತಗುಲಿದೆ. ಪ್ರಸ್ತುತ ವಿಮಾನವು ಸಂಪೂರ್ಣ ಪರಿಶೀಲನೆಗೆ ಒಳಗಾಗುತ್ತಿದೆ" ಎಂದು ಆಕಾಶ ಏರ್ ಪ್ರಕಟಣೆಯಲ್ಲಿ ತಿಳಿಸಿದೆ.
ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.