ನವದೆಹಲಿ: ರಾಷ್ಟ್ರ ರಾಜಧಾನಿಯ ಮೂರು ಶಾಲೆಗಳಿಗೆ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೆಲಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಪ್ರಶಾಂತ್ ವಿಹಾರ್ ಮತ್ತು ದ್ವಾರಕಾ ಸೆಕ್ಟರ್ 16 ರಲ್ಲಿರುವ ಸಿಆರ್‌ಪಿಎಫ್ ಶಾಲೆ ಮತ್ತು ಚಾಣಕ್ಯಪುರಿಯಲ್ಲಿರುವ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಕುರಿತು ಪೊಲೀಸರಿಗೆ ಕರೆ ಮಾಡಿ ತಿಳಿಸಲಾಯಿತು.
ತಕ್ಷಣವೇ ಪೊಲೀಸ್ ತಂಡಗಳು ಆ ಶಾಲೆಗಳಿಗೆ ತೆರಳಿ ಪರಿಶೀಲಿಸಿದವು ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಸಿಆರ್ ಪಿಎಫ್ ಶಾಲೆಯಲ್ಲಿ ಬಾಂಬ್ ಬೆದರಿಕೆ ಕುರಿತು ದ್ವಾರಕಾ ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ತದನಂತರ ಸ್ಥಳೀಯ ಪೊಲೀಸರು, ಸ್ನಿಫರ್ ಡಾಗ್‌ಗಳು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಶಾಲೆಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಸೈಬರ್ ಪೊಲೀಸರು ಇಮೇಲ್‌ನ ಮೂಲವನ್ನು ಖಚಿತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಶಾಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇದುವರೆಗೆ ಯಾವುದೇ ಅನುಮಾನಾಸ್ಪದವಾಗಿ ಪತ್ತೆಯಾಗಿಲ್ಲ ಎಂದು ಡಿಸಿಪಿ ತಿಳಿಸಿದ್ದಾರೆ.