ಸಿಯೋನಿ: ದೇಗುಲ ನಿರ್ಮಾಣ ಕಾಮಗಾರಿ ವೇಳೆ ಕೆಲಸ ಮಾಡುವ ನೆಪದಲ್ಲಿ ಫೋಟೋಗೆ ಪೋಸ್ ನೀಡುತ್ತಿದ್ದ ವೈದ್ಯರೊಬ್ಬರು ಗುಂಡಿಗೆ ಬಿದ್ದ ಘಟನೆ ವ್ಯಾಪಕ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಸಿಯೋನಿಯಲ್ಲಿ ದೇವಾಲಯ ನಿರ್ಮಾಣ ಸ್ಥಳದಲ್ಲಿ ಸಹಾಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಫೋಟೋಗೆ ಪೋಸ್ ನೀಡುತ್ತಿದ್ದಾಗಲೇ ಆರು ಅಡಿ ಆಳದ ಹೊಂಡಕ್ಕೆ ಬಿದ್ದಿದ್ದಾರೆ.
ಮೂಲಗಳ ಪ್ರಕಾರ ಚಿತ್ರಗುಪ್ತ ದೇವಾಲಯ ನವೀಕರಣ ಸಮಿತಿಯ ಅಧ್ಯಕ್ಷ ಡಾ. ಪ್ರಫುಲ್ ಶ್ರೀವಾಸ್ತವ ಅವರು ಸ್ವಯಂಸೇವಕರಾಗಿ ಮತ್ತು ತಾವು ಕೆಲಸ ಮಾಡುತ್ತಿರುವ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಳ್ಳಲು ನಿರ್ಮಾಣ ಸ್ಥಳದಲ್ಲಿದ್ದರು.
ಈ ವೇಳೆ ಹೊಂಡಕ್ಕೆ ಸಿಮೆಂಟ್ ಸುರಿಯುವ ಪೋಸ್ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಅವರು ನಿಂತಿದ್ದ ಸ್ಲಾಬ್ ಕುಸಿದಿದ್ದು, ಅವರು ಹೊಂಡದೊಳಗೆ ಬಿದ್ದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸರಿಯಾಗಿ ಬರಲಿಲ್ಲ.. ಇನ್ನೊಂದು ಬಾರಿ ತೆಗೆ ಎಂದಿದ್ದ ವೈದ್ಯ
ಇನ್ನು ವಿಡಿಯೋದಲ್ಲಿ ವೈದ್ಯ ಡಾ. ಪ್ರಫುಲ್ ಶ್ರೀವಾಸ್ತವ ಮೊದಲ ಬಾರಿ ಗುಂಡಿಗೆ ಸಿಮೆಂಟ್ ಹಾಕಿದಾಗ ಫೋಟೋ ಸರಿಯಾಗಿ ಬರಲಿಲ್ಲ.. ಇನ್ನೊಮ್ಮೆ ಫೋಟೋ ತೆಗಿ... ಎಂದು ಹೇಳುವುದು ಕೇಳುತ್ತದೆ. ಈ ರೀತಿ ಹೇಳಿದ ಮರು ಕ್ಷಣವೇ ವೈದ್ಯ ಗುಂಡಿಗೆ ಬೀಳುತ್ತಾರೆ. ಘಟನೆಯಲ್ಲಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಇನ್ನು ಈ ವಿಡಿಯೋಗೆ ತರಹೇವಾರಿ ಕಮೆಂಟ್ ಗಳು ಬರುತ್ತಿದ್ದು, ಸೇವೆಯಲ್ಲಿ ಅರ್ಪಣೆ ಇರಬೇಕು.. ನಾಟಕ ಅಲ್ಲ.. ಸೇವೆ ಫೋಟೋಶೂಟ್ ಆಗಿ ಬದಲಾದಾಗ ಧ್ಯಾನ ಕೆಲಸದ ಮೇಲೆ ಅಲ್ಲ.. ಕ್ಯಾಮೆರಾ ಮೇಲೆ ಇರುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.