ನವದೆಹಲಿ: ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವ್ಯೋಮಗಾಮಿ ಶುಭಾಂಶು ಶುಕ್ಲಾ ಬದಲಿಗೆ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಬಹುದಾಗಿತ್ತು ಎಂದು ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೌದು.. ಆಕ್ಸಿಯಮ್-4 ಮಿಷನ್ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಭಾರತ ಮೂಲದ ವ್ಯೋಮಗಾಮಿ ಶುಭಾಂಶು ಶುಕ್ಲಾ ತಮ್ಮ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ್ದಾರೆ.
ಭಾರತೀಯ ಕಾಲಮಾನ ಮಧ್ಯಾಹ್ನ 3.01 ನಿಮಿಷಕ್ಕೆ ಕ್ಯಾಲಿಪೋರ್ನಿಯಾದ ಕರಾವಳಿ ಪ್ರದೇಶದಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಬಂದಿಳಿಯಿತು. ಅವರ ಈ ಸಾಧನೆಯನ್ನು ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಹೊಗಳುತ್ತಿದ್ದರೆ ಇತ್ತ ಭಾರತದಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ನಾಯಕ ಉದಿತ್ ರಾಜ್ ಎಂಬುವವರು 'ಬ್ರಾಹ್ಮಣ ಸಮುದಾಯದ ಶುಭಾಂಶು ಶುಕ್ಲಾ ಬದಲಿಗೆ ದಲಿತ ಗಗನಯಾನಿಯೊಬ್ಬನನ್ನ ಕಳಿಸಬೇಕಿತ್ತು ಎನ್ನುವ ಮೂಲಕ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ಈ ಹಿಂದೆ ರಾಕೇಶ್ ಶರ್ಮಾ ಅವರನ್ನ ಕಳಿಸಿದಾಗ ಎಸ್ಸಿ, ಎಸ್ಟಿ, ಒಬಿಸಿ ಜನರು ಅಷ್ಟೊಂದು ವಿದ್ಯಾವಂತರಾಗಿರಲಿಲ್ಲ. ಈ ಬಾರಿ ದಲಿತರನ್ನ ಕಳಿಸುವ ಸರದಿ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾಸಾ, ಪರೀಕ್ಷೆ ನಡೆಸಿ ಶುಭಾಂಶು ಶುಕ್ಲಾರನ್ನ ಆಯ್ಕೆ ಮಾಡಿಲ್ಲ, ಶುಕ್ಲಾ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿಯನ್ನ ಕಳುಹಿಸಬಹುದಿತ್ತು ಎಂದು ಹೇಳಿದ್ದಾರೆ.
ಆಕ್ಸಿಯಮ್-4 ಬಾಹ್ಯಾಕಾಶ ಯಾತ್ರೆಗೆ ಹೋಗಿ ಶುಭಾಂಶು ಶುಕ್ಲಾ (Shubhanshu Shukla) ವಾಪಸ್ ಆಗಿದ್ದಾರೆ. ಈ ಹೊತ್ತಲ್ಲಿ ಕ್ಯಾಪ್ಟನ್ ಶುಕ್ಲಾ ಬದಲಿಗೆ ದಲಿತ ಅಭ್ಯರ್ಥಿಯನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎಂದು ಅವರು ಪ್ರಶ್ನೆ ಎತ್ತಿದ್ದಾರೆ. ಇದರಿಂದ ‘ಅರ್ಹತೆ ಮತ್ತು ಮೀಸಲಾತಿ’ ಬಗೆಗಿನ ಚರ್ಚೆ ಆರಂಭಗೊಂಡಿದೆ.
ವ್ಯಾಪಕ ವಿರೋಧ
ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಅವರು ವೈಜ್ಞಾನಿಕ ಸಾಧನೆಯನ್ನೂ ಸಹ ರಾಜಕೀಯಗೊಳಿಸುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಯಾರು ಈ ಉದಿತ್ ರಾಜ್
2019ರಲ್ಲಿ ಟಿಕೆಟ್ ನಿರಾಕರಿಸಲ್ಪಟ್ಟ ನಂತರ ಬಿಜೆಪಿಯನ್ನು ತೊರೆದು ಉದಿತ್ ರಾಜ್ ಕಾಂಗ್ರೆಸ್ ಸೇರಿದ್ದರು.
ವಿವಾದದ ಬೆನ್ನಲ್ಲೇ ಸ್ಪಷ್ಟನೆ
ಇನ್ನು ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ಕುರಿತು ಸ್ಪಷ್ಟನೆ ನೀಡಿರುವ ಉದಿತ್ ರಾಜ್, ತಮ್ಮ ಹೇಳಿಕೆಯನ್ನು ತಪ್ಪಾಗಿ ತಿರುಚಲಾಗುತ್ತಿದೆ. ನಾನು ಬ್ರಾಹ್ಮಣ ವ್ಯಕ್ತಿ ಬಾಹ್ಯಾಕಾಶಕ್ಕೆ ಹೋಗಬಾರದು ಎಂದು ಹೇಳಿಲ್ಲ. ಈಗ ದಲಿತರು ಎಲ್ಲ ಕ್ಷೇತ್ರಗಳಲ್ಲೂ ತನ್ಮ ಪ್ರತಿಭೆ ತೋರುತ್ತಿದ್ದಾರೆ. ಅವರಿಗೂ ಅವಕಾಶ ನೀಡಬೇಕು ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.
ಅಂದಹಾಗೆ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳಸಿದ ಮೊದಲ ಭಾರತೀಯ. 1984 ಏಪ್ರಿಲ್ನಲ್ಲಿ ಅಂದಿನ ಸೋವಿಯತ್ ಒಕ್ಕೂಟದ ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಭಾಗವಾಗಿ ಹೋಗಿದ್ದರು. ಅದಾದ ಬಳಿಕ ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಬೆಳಸಿದ 2ನೇ ಭಾರತೀಯ ವ್ಯಕ್ತಿ ಎಂಬ ಕೀರ್ತಿಗೆ ಇದೀಗ ಶುಭಾಂಶು ಶುಕ್ಲಾ ಪಾತ್ರರಾಗಿದ್ದಾರೆ.
ಮಿಷನ್ ಸಕ್ಸಸ್
ಸ್ಪೇಸ್ ಎಕ್ಸ್, ನಾಸಾ ಸಹಭಾಗಿತ್ವದ ಆಕ್ಸಿಯಮ್-4 ಮಿಷನ್ ಪೈಲಟ್ ಆಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಶುಭಾಂಶು ಶುಕ್ಲಾ, 18 ದಿನಗಳ ಕಾಲ ಬಾಹ್ಯಾಕಾಶ ಕೇಂದ್ರದಲ್ಲಿದ್ದು ಅಧ್ಯಯನ ಮಾಡಿದ್ದಾರೆ. ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿ ಐಎಸ್‌ಎಸ್‌ನಲ್ಲಿ 18 ದಿನಗಳ ವಾಸ್ತವ್ಯದ ಬಳಿಕ ಶುಭಾಂಶು ಶುಕ್ಲಾ ವಾಪಸ್ ಆಗಿದ್ದಾರೆ. ತಮ್ಮ 17 ದಿನಗಳ ವಾಸ್ತವ್ಯದ ಅವಧಿಯಲ್ಲಿ ಗಗನಯಾತ್ರಿಗಳು 60 ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ್ದಾರೆ.
ಇದು ಅಂತರರಾಷ್ಟ್ರೀಯ ಸಂಶೋಧನಾ ಪ್ರಯತ್ನಗಳಿಗೆ ಅಮೂಲ್ಯವಾದ ಡೇಟಾವನ್ನು ಕೊಡುಗೆ ನೀಡಿದೆ. ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ಆಕ್ಸ್-4ನ ಸದಸ್ಯರಾದ ಕಮಾಂಡರ್ ಪೆಗ್ಗಿ ವಿಟ್ಸನ್ (ಯುಎಸ್ಎ), ಮಿಷನ್ ಸ್ಪೆಷಲಿಸ್ಟ್ ಸಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ (ಪೋಲೆಂಡ್) ಮತ್ತು ಟಿಬೋರ್ ಕಾಪು (ಹಂಗೇರಿ) ಭೂಮಿಗೆ ವಾಪಸ್ ಆಗಿದ್ದಾರೆ.