ಮೊರಾದಾಬಾದ್: ಉತ್ತರ ಪ್ರದೇಶದ ಇಬ್ಬರು ಮುಸ್ಲಿಂ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕರನ್ನು ಮದುವೆಯಾಗಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಮುಸ್ಲಿಂ ಯುವತಿಯರಾದ ಸ್ವಲೆಹೀನ್ ಮತ್ತು ನೂರ್ ಫಾತಿಮಾ ಎಂಬ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ತಮ್ಮ ಹೆಸರನ್ನು ಶಾಲಿನಿ ಮತ್ತು ನೀಲಂ ಎಂದು ಬದಲಿಸಿಕೊಂಡಿದ್ದಾರೆ.
ಅಲ್ಲದೆ ಈ ಇಬ್ಬರು ಯುವತಿಯರು ಹಿಂದೂ ಧರ್ಮಕ್ಕೆ ಸೇರಿದ ಅಮಿತ್ ಮತ್ತು ಗೌರವ್ ಎಂಬ ಯುವಕರನ್ನು ಮೊರಾದಾಬಾದ್ ನ ಆರ್ಯ ಸಮಾಜ್ ದೇಗುಲದಲ್ಲಿ ವಿವಾಹವಾಗಿದ್ದಾರೆ.
ಜೀವ ಬೆದರಿಕೆ
ಇನ್ನು ಮುಸ್ಲಿಂ ಧರ್ಮಕ್ಕೆ ಸೇರಿದ್ದ ಯುವತಿಯರು ಹಿಂದೂ ಧರ್ಮಕ್ಕೆ ಬದಲಾಗದಂತೆ ಸಮುದಾಯದ ಹಿರಿಯರು ಮತ್ತು ನಾಯಕರ ಒತ್ತಡ ಮತ್ತು ಬೆದರಿಕೆಗಳ ನಡುವೆಯೂ ಯುವತಿಯರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ವಿಶೇಷ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅರ್ಚಕರು ಯುವತಿಯರನ್ನು ಶುದ್ದೀಕರಣಗೊಳಿಸಿ ಮದುವೆ ಕಾರ್ಯ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ.
ಆರ್ಯ ಸಮಾಜ ದೇವಾಲಯಗಳು ಹಿಂದೂ ವಿಧಿಗಳು ಮತ್ತು ಸಮಾರಂಭಗಳ ಪ್ರಕಾರ ವಿವಾಹಗಳನ್ನು ಸುಗಮಗೊಳಿಸುತ್ತವೆ. ಆರ್ಯ ಸಮಾಜವು ಅಂತರ್ಜಾತಿ ವಿವಾಹಗಳನ್ನು ಅನುಮತಿಸುತ್ತದೆ, ಆದರೆ ಇಸ್ಲಾಂ ಸೇರಿದಂತೆ ಕೆಲವು ಧರ್ಮಗಳ ವ್ಯಕ್ತಿಗಳು ಮೊದಲು "ಶುದ್ಧಿ" ಎಂಬ ಮತಾಂತರ ಪ್ರಕ್ರಿಯೆಗೆ ಒಳಗಾಗಬೇಕು ಎಂಬ ಅವಶ್ಯಕತೆಯೊಂದಿಗೆ ಅಂತರ್-ಧರ್ಮೀಯ ವಿವಾಹಗಳನ್ನು ಅನುಮತಿಸಲಾಗಿದೆ.
ಇದೇ ವಿಚಾರವಾಗಿ ಸೆಲ್ಫಿ ವಿಡಿಯೋ ಮಾಡಿ ಹೇಳಿಕೆ ನೀಡಿರುವ ಯುವತಿ, ನಾನು ನನ್ನ ಸ್ವಇಚ್ಛೆಯಿಂದಲೇ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ. ಅಂತೆಯೇ ನನ್ನ ಸ್ವಇಚ್ಛೆಯಿಂದಲೇ ಮದುವೆಯಾಗಿದ್ದೇನೆ ಎಂದು ಹೇಳಿದ್ದಾಳೆ.