ಲಖನೌ: ಅಂತಾರಾಷ್ಟ್ರೀಯ ಹಣಕಾಸಿನ ನೆರವು ಮತ್ತು ISIS ಶೈಲಿಯಲ್ಲಿ ಮತಾಂತರ ದಂಧೆಯನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳಾದ್ಯಂತ ಹತ್ತು ಜನರನ್ನು ಬಂಧಿಸಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕೃಷ್ಣ, ಮತಾಂತರ ದಂಧೆ ತಡೆಯುವ ನಿಟ್ಟಿನಲ್ಲಿ ಪೊಲೀಸರು ಮಿಷನ್ ಅಸ್ಮಿತಾ' ಕಾರ್ಯಾಚರಣೆ ಆರಂಭಿಸಿದ್ದು, ಮತಾಂತರ ಸಿಂಡಿಕೇಟ್ ನ ಪ್ರಮುಖರಾದ ಮೊಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಜಹಾಂಗೀರ್ ಆಲಂ ಖಾಸ್ಮಿ ಅವರನ್ನು ಎಟಿಎಸ್ ಬಂಧಿಸಿರುವುದಾಗಿ ತಿಳಿಸಿದರು.
ಜಮಾಲುದ್ದೀನ್ ಎಂದೂ ಕರೆಯಲ್ಪಡುವ ಛಂಗೂರ್ ಬಾಬಾ ನೇತೃತ್ವದ ಸಿಂಡಿಕೇಟ್ ವಿಚಾರಣೆಯನ್ನು ಎಸ್ ಐಟಿ ಮತ್ತು ವಿಶೇಷ ಕಾರ್ಯಪಡೆ ಮುಂದುವರೆಸಿವೆ. ಲವ್ ಜಿಹಾದ್, ಅಕ್ರಮವಾಗಿ ಮತಾಂತರ ದಂಧೆ ನಡೆಸುವವರು, ತೀವ್ರವಾದಿಗಳು ಮತ್ತು ಜಾಗತಿಕ ಮಟ್ಟದಲ್ಲಿರುವ ಜಿಹಾದಿಗಳ ಜೊತೆಗೆ ಸೇರಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸುವ ಜಾಲದೊಂದಿಗೆ ಕೈ ಜೋಡಿಸುತ್ತಿರುವುದು ಕಂಡುಬಂದಿದೆ. ಈ ಸಂಬಂಧ ಆರು ರಾಜ್ಯಗಳಾದ್ಯಂತ 10 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.
ಮತಾಂತರಕ್ಕೆ ISIS ತಂತ್ರ, ವಿದೇಶದಿಂದ ಹಣ ಸಂದಾಯ: ಆರೋಪಿಗಳು ಯುವತಿಯರನ್ನು ಗುರಿಯಾಗಿಸಿಕೊಂಡಿದ್ದು, ಮತಾಂತರಕ್ಕೆ ಅನುಕೂಲವಾಗುವಂತೆ ಆಮಿಷವೊಡ್ಡುವುದು, ಲವ್ ಜಿಹಾದ್ ಮತ್ತಿತರ ವಿಧಾನಗಳ ಮೂಲಕ ಪ್ರಭಾವ ಬೀರಿದ್ದಾರೆ. ISIS ಶೈಲಿಯಲ್ಲಿ ಮತಾಂತರ ನಡೆಸಲಾಗುತ್ತಿದೆ. ಈ ಗುಂಪುಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಎಸ್‌ಡಿಪಿಐ ಮತ್ತು ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಸಾಧ್ಯತೆಗಳಿವೆ. ಈ ಮತಾಂತರ ಕಾರ್ಯಕ್ಕೆ "ಕೆನಡಾ, ಅಮೇರಿಕಾ, ಲಂಡನ್ ಮತ್ತು ದುಬೈಯಿಂದ ಹಣ ಸಂದಾಯವಾಗಿರುವುದು ಪತ್ತೆಯಾಗಿದೆ ಎಂದು ಡಿಜಿಪಿ ಹೇಳಿದರು.
ಕೆನಡಾ, ಅಮೇರಿಕಾ, ಲಂಡನ್ ಮತ್ತು ದುಬೈನಿಂದ ಧನಸಹಾಯ ಮತ್ತು ಅಲ್ಲಿ ವಾಸಿಸುವ ಜನರು ಕೂಡಾ ಮತಾಂತರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಈ ಸಂಬಂಧ ತನಿಖೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ಬಂಧಿಸಿ, ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.