ನವದೆಹಲಿ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಭಾವನ ಜೊತೆಗೆ ಸೇರಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ನೈಋತ್ಯ ದೆಹಲಿಯ ದ್ವಾರಕಾದ ನಿವಾಸಿ ಕರಣ್ ದೇವ್ (35) ಅವರನ್ನು ಅವರ ಪತ್ನಿ ಸುಷ್ಮಿತ್ ದೇವ್ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಲವರ್ ರಾಹುಲ್ ದೇವ್ ಜೊತೆಗೆ ಸೇರಿಕೊಂಡು ಸುಷ್ಮಿತಾ ದೇವ್, ತನ್ನ ಪತಿಯ ಕೊಲೆಗೆ ಸಂಚು ರೂಪಿಸಿರುವುದು ವಾಟ್ಸಾಪ್ ಚಾಟ್ ನಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜುಲೈ 13 ರಂದು ನಿಗೂಢ ರೀತಿಯಲ್ಲಿ ಕರಣ್ ದೇವ್ ಅವರು ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಕೊಲೆ ಸಂಚಿನ ಆರೋಪದ ಮೇಲೆ ಆತನ ಹೆಂಡತಿ ಸುಶ್ಮಿತಾ ಮತ್ತು ಸಹೋದರ ರಾಹುಲ್ ನನ್ನು ಬಂಧಿಸಿದ್ದಾರೆ.
ಆಕಸ್ಮಿಕ ವಿದ್ಯುತ್ ಶಾಕ್ ನಿಂದ ಕರಣ್ ಸಾವನ್ನಪ್ಪಿರುವುದಾಗಿ ಅವರ ಕುಟುಂಬಕ್ಕೆ ಸುಶ್ಮಿತಾ ಹೇಳಿದ್ದಳು. ಸಮೀಪದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ಆಕಸ್ಮಿಕ ಸಾವು ಆಗಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಲು ಸುಶ್ಮಿತಾ ಮತ್ತು ಆಕೆಯ ಪ್ರಿಯಕರ ರಾಹುಲ್ ನಿರಾಕರಿಸಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಿದ್ದರು.
ತಿರುವು ಪಡೆದ ಪ್ರಕರಣ: ಘಟನೆ ನಡೆದ ಮೂರು ದಿನಗಳ ನಂತರ ಮೃತನ ಕಿರಿಯ ಸಹೋದರ ಕುನಾಲ್, ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆತನ ಪತ್ನಿ ಸುಶ್ಮಿತಾ ಮತ್ತು ಸಹೋದರ ರಾಹುಲ್ ಸೇರಿ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಪೊಲೀಸರ ಮುಂದೆ ಹೇಳಿದ್ದರು. ಈ ವೇಳೆ ಸುಶ್ಮಿತಾ ಮತ್ತು ರಾಹುಲ್ ನಡುವಿನ ವಾಟ್ಸಪ್ ಚಾಟನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿದ್ರೆ ಮಾತ್ರೆ ಕುಡಿಸಿ ಕರೆಂಟ್ ಶಾಕ್: ಸುಶ್ಮಿತಾ ಮತ್ತು ರಾಹುಲ್ ನಡುವಿನ ಅಕ್ರಮ ಸಂಬಂಧವೇ ಕರಣ್ ಕೊಲೆಗೆ ಪ್ರಮುಖ ಕಾರಣ ಎಂಬುದನ್ನು ಚಾಟ್ ಗಳು ಬಹಿರಂಗಪಡಿಸಿವೆ. ಅಣ್ಣನನ್ನು ಕೊಲೆ ಮಾಡಲು ಏನು ಮಾಡಬೇಕು ಎಂಬುದನ್ನು ರಾಹುಲ್ ಸಲಹೆ ನೀಡಿರುವುದು ತಿಳಿದುಬಂದಿದೆ. ನಿದ್ರೆ ಮಾತ್ರೆಗಳನ್ನು ಊಟದಲ್ಲಿ ಬೆರೆಸಿ ಕರಣ್ ಪ್ರಜ್ಞೆ ತಪ್ಪುವ ಹಾಗೆ ಮಾಡಿದ್ದಾರೆ. ಬಳಿಕ ಆ ಸಾವನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಇಬ್ಬರು ಸೇರಿ ಕರಣ್ ಗೆ ವಿದ್ಯುತ್ ಶಾಕ್ ನೀಡಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಆರೋಪಿಗಳನ್ನು ಇದನ್ನು ಒಪ್ಪಿಕೊಂಡಿದ್ದಾರೆ. ಸುಶ್ಮಿತಾ ಹಾಗೂ ರಾಹುಲ್ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿರುವುದು ತನಿಖೆಯಿಂದ ತಿಳಿದುಬಂದಿದೆ.