ಮುಂಬೈ: ವಿಚ್ಛೇದನದ ನಂತರ ಕೆಲಸ ಮಾಡುವ ಮಹಿಳೆಗೂ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ತೀರ್ಪು ನೀಡಿದೆ.
ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪತ್ನಿಗೆ ಪ್ರತಿ ತಿಂಗಳು 15,000 ರೂ. ಜೀವನಾಂಶ ಪಾವತಿಸಬೇಕೆಂದು ಆದೇಶಿಸಿದೆ.
ಹಲವಾರು ಅಂಶಗಳನ್ನು ಪರಿಗಣಿಸಿದ ನಂತರ, ಆ ವ್ಯಕ್ತಿಯ ಹೇಳಿಕೆಗಳಿಗೆ ಯಾವುದೇ ಕಾನೂನು ಅರ್ಹತೆ ಇಲ್ಲ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ ಫಾಲ್ಕೆ ಹೇಳಿದರು. ಬಳಿಕ ನ್ಯಾಯಾಲಯವು ಅವರ ಅರ್ಜಿಯನ್ನು 'ಅಮಾನ್ಯ' ಎಂದು ಅಧಿಕೃತವಾಗಿ ಘೋಷಿಸಿತು.
ಈ ಪ್ರಕರಣದಲ್ಲಿ, ವ್ಯಕ್ತಿಯು ನಾಗ್ಪುರದ ನಿವಾಸಿಯಾಗಿದ್ದರೆ, ಮಹಿಳೆ ವಾರ್ಧಾದವರು. ದಂಪತಿ ವಿಚ್ಛೇದನ ಪಡೆದ ನಂತರ, ವಾರ್ಧಾ ಸೆಷನ್ಸ್ ನ್ಯಾಯಾಲಯವು ಮಹಿಳೆಗೆ ಜೀವನಾಂಶ ನೀಡುವಂತೆ ಪತಿಗೆ ಆದೇಶಿಸಿತ್ತು.
ವ್ಯಕ್ತಿ ತನ್ನ ಅರ್ಜಿಯಲ್ಲಿ, ತನ್ನ ಮಾಜಿ ಪತ್ನಿ (ಫಿಜಿಯೋಥೆರಪಿಸ್ಟ್) ತನ್ನನ್ನು ಮತ್ತು ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಸಾಕಷ್ಟು ಸಂಪಾದಿಸುತ್ತಿದ್ದಾರೆ. ಹೀಗಾಗಿ, ಅವರಿಗೆ ಜೀವನಾಂಶದ ಅಗತ್ಯವಿಲ್ಲ ಎಂದು ಹೇಳಿದ್ದರು.
ಈ ವರ್ಷದ ಆರಂಭದಲ್ಲಿ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ತೀರ್ಪು ನೀಡಿತ್ತು. ಮಹಿಳೆಯೊಬ್ಬರು ತಮ್ಮ ಮಗುವನ್ನು ನೋಡಿಕೊಳ್ಳಲು ಕೆಲಸವನ್ನು ತೊರೆಯುವ ನಿರ್ಧಾರವನ್ನು ಸ್ವಯಂಪ್ರೇರಿತ ನಿರುದ್ಯೋಗವೆಂದು ಪರಿಗಣಿಸಲಾಗುವುದಿಲ್ಲ ಮತ್ತು ಅವರು ಜೀವನಾಂಶಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿತ್ತು. ಜೀವನಾಂಶವನ್ನು ನಿರ್ಧರಿಸುವಾಗ ಪತ್ನಿಯ ಗಳಿಕೆಯ ಸಾಮರ್ಥ್ಯದ ಬದಲಿಗೆ ಆಕೆಯ ನಿಜವಾದ ಆದಾಯವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿತು.
ಮಹಿಳೆ ಮತ್ತು ಅವರ ಆರು ವರ್ಷದ ಮಗನಿಗೆ ತಲಾ 7,500 ರೂ.ಗಳನ್ನು ಪಾವತಿಸಬೇಕೆಂಬ 2023ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದು, ಕೇವಲ 10,000 ರೂ.ಗಳಿಂದ 15,000 ರೂ.ಗಳನ್ನು ಮಾತ್ರ ಸಂಪಾದಿಸುತ್ತೇನೆ. ತನ್ನ ಪರಿತ್ಯಕ್ತ ಪತ್ನಿ ಉನ್ನತ ಶಿಕ್ಷಣ ಪಡೆದಿದ್ದು, ಬೋಧನಾ ಕೆಲಸವನ್ನು ಬಿಡುವ ಮೊದಲು ತಿಂಗಳಿಗೆ 40,000-50,000 ರೂ.ಗಳನ್ನು ಸಂಪಾದಿಸುತ್ತಿದ್ದರು ಎಂದು ಅವರು ಹೇಳಿದ್ದರು.