ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಮಹಾ ದುರಂತವೊಂದು ತಪ್ಪಿದ್ದು, ನೂರಾರು ಪ್ರಯಾಣಿಕರ ಹೊತ್ತು ಸಾಗುತ್ತಿದ್ದ ರೈಲು ಕೂದಲೆಳೆ ಅಂತರದಲ್ಲಿ ಕುಸಿತದಿಂದ ಪಾರಾಗಿದೆ.
ಹೌದು.. ಹಿಮಾಚಲ ಪ್ರದೇಶದ ಕಾಂಗ್ರಾದ ಧಂಗು ಎಂಬಲ್ಲಿ ನೂರಾರು ಜನರನ್ನು ಹೊತ್ತೊಯ್ಯುತ್ತಿದ್ದ ರೈಲು ಚಕ್ಕಿ ನದಿ ಸೇತುವೆಯನ್ನು ದಾಟುತ್ತಿದ್ದಂತೆಯೇ ಸೇತುವೆ ಅಡಿಪಾಯ ಕುಸಿದಿದೆ.
ರೈಲು ಸೇತುವೆ ದಾಟಿದ ಬಳಿಕ ಸೇತುವೆ ಅಡಿಪಾಯ ಕುಸಿದಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಭಾರಿ ಪ್ರವಾಹದಿಂದಾಗಿ ಸೇತುವೆಯ ಅಡಿಪಾಯ ಕುಸಿಯುವ ಕೆಲವೇ ನಿಮಿಷಗಳ ಅಂತರದಲ್ಲಿ ಕುಸಿಯುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಧಂಗು ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಗಡಿಯಲ್ಲಿದೆ ಮತ್ತು ಈ ಸೇತುವೆ ಪಠಾಣ್‌ಕೋಟ್ ಮೂಲಕ ದೆಹಲಿ-ಜಮ್ಮು ಪ್ರಮುಖ ರೈಲು ಮಾರ್ಗದಲ್ಲಿದೆ.
ನೂರ್ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ರತನ್ ಈ ಕುರಿತು ಮಾತನಾಡಿ, 'ಈ ಪ್ರದೇಶದಲ್ಲಿ ಅತಿಯಾದ ಮಳೆಯಿಂದಾಗಿ ತಡೆಗೋಡೆ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಇದೀಗ ಪಕ್ಕದ ಧಂಗು ರಸ್ತೆಯನ್ನು ಮುಚ್ಚಿದ್ದೇವೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ' ಎಂದು ಹೇಳಿದರು.
ಅಕ್ರಮ ಗಣಿಕಾರಿಕೆಯೇ ಅಡಿಪಾಯ ಕುಸಿತಕ್ಕೆ ಕಾರಣ
ಇನ್ನು ಈ ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿದ್ದು, ಇದರಿಂದಾಗಿ ನದಿಪಾತ್ರದ ರಚನೆಗಳು ಮತ್ತು ಗುಡ್ಡಗಳು ದುರ್ಬಲವಾಗಿವೆ. ನದಿಪಾತ್ರ ಮತ್ತು ಹತ್ತಿರದ ರಚನೆಗಳು ದುರ್ಬಲಗೊಂಡು ಸೇತುವೆ ಅಡಿಪಾಯ ಕುಸಿದಿದೆ ಎಂದು ಸ್ಥಳೀಯರು ಬಹಳ ಹಿಂದಿನಿಂದಲೂ ದೂರುತ್ತಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಭಯಾನಕ ದೃಶ್ಯಗಳು ರೈಲು ಪವಾಡಸದೃಶವಾಗಿ ಪಾರಾಗಿರುವುದನ್ನು ಸೆರೆಹಿಡಿದಿವೆ. ರೈಲು ಸೇತುವೆಯಿಂದ ಚಲಿಸುತ್ತಲೇ ಸೇತುವೆಯ ಕೆಳಗೆ ಅಡಿಪಾಯದ ರಚನೆಗಳು ಕುಸಿದಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದು ವೀಕ್ಷಕರಲ್ಲಿ ಕಳವಳವನ್ನುಂಟುಮಾಡಿದೆ.