ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಅನಿರೀಕ್ಷಿತ ರಾಜೀನಾಮೆ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಈ ನಡುವಲ್ಲೇ ಕಾಂಗ್ರೆಸ್ ನೀಡಿರುವ ಹೇಳಿಕೆಯೊಂದು ವಿವಾಧ ಭುಗಿಲೇಳುವಂತೆ ಮಾಡಿದೆ.
ಕೇಂದ್ರ ಸರ್ಕಾರದ ಪ್ರಮುಖ ಸಚಿವರಾದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು ಅವರು ಕಲಾಪ ವ್ಯವಹಾರ ಸಲಹಾ ಸಮಿತಿ (ಬಿಎಸಿ) ಸಭೆಯಲ್ಲಿ ಗೈರುಹಾಜರಾಗಿರುವುದು ಮತ್ತು ಮೇಲ್ಮನೆಯಲ್ಲಿ ನಡ್ಡಾ ಅವರ ಹೇಳಿಕೆಗಳೇ ರಾಜೀನಾಮೆಗೆ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಸೋಮವಾರ (ಜುಲೈ 21) ನಡೆದ ಬಿಎಸಿ ಸಭೆಯಲ್ಲಿ ಸದನದ ನಾಯಕ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಿಜಿಜು ಅವರ ಅನುಪಸ್ಥಿತಿಯಿಂದ ಧನಕರ್ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕಾಂಗ್ರೆಸ್ ವಾದಿಸಿದೆ.
ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲಕ್ಕೆ ಪ್ರತಿಕ್ರಿಯೆ ನೀಡುವಾಗ ಮಾತನಾಡಿದ ನಡ್ಡಾ ಅವರು, ಇಲ್ಲಿ “ಯಾವುದೂ ದಾಖಲಾಗುವುದಿಲ್ಲ ಮತ್ತು ನಾನು ಹೇಳುವುದು ಮಾತ್ರ ದಾಖಲಾಗುತ್ತದೆ ಎಂದು ಹೇಳಿದ್ದರು. ಇದು ಉಪರಾಷ್ಟ್ರಪತಿಗೆ ಮಾಡಿದ “ಅವಮಾನ” ಎಂದು ಕರೆದಿದೆ. ಅಲ್ಲದೆ, ಧನಕರ್ ಅವರ ದಿಢೀರ್ ರಾಜೀನಾಮೆಗೆ ಈ ಬೆಳವಣಿಗೆಯೇ ಕಾರಣ ಎಂದು ಆರೋಪಿಸಿದೆ.
ರಾಜ್ಯಸಭೆಯ ಕಲಾಪ ಸಲಹಾ ಸಮಿತಿಯು ಸರ್ಕಾರಿ ಶಾಸಕಾಂಗ ಮತ್ತು ಇತರ ಕಲಾಪಗಳಿಗೆ ಸಮಯ ಹಂಚಿಕೆಯನ್ನು ಶಿಫಾರಸು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಮೊದಲ ಸಭೆ ನಿನ್ನೆ (ಜುಲೈ 21) ಮಧ್ಯಾಹ್ನ 12.30ಕ್ಕೆ ನಡೆದಿದ್ದು, ನಡ್ಡಾ ಮತ್ತು ರಿಜಿಜು ಸೇರಿದಂತೆ ಹೆಚ್ಚಿನ ಸದಸ್ಯರು ಆರಂಭದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಕೆಲವು ಚರ್ಚೆಯ ನಂತರ, ಈ ಸಭೆಯನ್ನು ಸಂಜೆ 4.30ಕ್ಕೆ ಮುಂದೂಡಲಾಯಿತು. ಮತ್ತೆ ಸಭೆ ಪುನರಾರಂಭವಾದಾಗ, ಜೆಪಿ ನಡ್ಡಾ ಹಾಗೂ ಕಿರಣ್ ರಿಜಿಜು ಅವರು ಗೈರು ಹಾಜರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ, ಕೇಂದ್ರ ಸಚಿವ ಎಲ್. ಮುರುಗನ್ ಎರಡನೇ ಸಭೆಯಲ್ಲಿ ಸರ್ಕಾರವನ್ನು ಪ್ರತಿನಿಧಿಸಿದರು. ಈ ವೇಳೆ ಸಭೆಯನ್ನು ಮರುದಿನಕ್ಕೆ ನಿಗದಿಪಡಿಸುವಂತೆ ಮುರುಗನ್ ಅವರು ಧನಕರ್ ಬಳಿ ವಿನಂತಿಸಿದರು ಎಂದು ಮೂಲಗಳು ತಿಳಿಸಿವೆ.
ಆದರೆ, ಕಾಂಗ್ರೆಸ್ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಪ್ರಮುಖ ಸಂಸದೀಯ ಕೆಲಸದಲ್ಲಿ ತಾವು ನಿರತರಾಗಿದ್ದಾಗಿ ಮತ್ತು ಗೈರಿನ ಬಗ್ಗೆ ಮುಂಚಿತವಾಗಿಯೇ ಉಪರಾಷ್ಟ್ರಪತಿಗಳಿಗೆ ತಿಳಿಸಲಾಗಿತ್ತು ಎಂದು ಹೇಳಿದೆ.
ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಚಿವ ಜೆಪಿ ನಡ್ಡಾ ಅವರು, ಕೆಲವು ಮುಖ್ಯ ಸಂಸದ್ದೀಯ ಕೆಲಸಗಳಿದ್ದ ಕಾರಣ ಸಭೆಯಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ನಾವು ಮೊದಲೇ ಉಪರಾಷ್ಟ್ರಪತಿ ಅವರ ಕಚೇರಿಗೆ ಹೇಳಿದ್ದೆವು ಎಂದು ಹೇಳಿದ್ದಾರೆ.