ಪಾಟ್ನಾ: ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಬದಿಗೆ ಸರಿಸಲು ಬಿಜೆಪಿ ನಡೆಸುತ್ತಿರುವ ದೊಡ್ಡ ಪಿತೂರಿಯ ಭಾಗವಾಗಿ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಹಠಾತ್ ರಾಜೀನಾಮೆ ನೀಡಿದ್ದಾರೆ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮಂಗಳವಾರ ಆರೋಪಿಸಿದೆ.
ಈ ಹೇಳಿಕೆಯನ್ನು ಮುಖ್ಯಮಂತ್ರಿಯವರ ಆಪ್ತ ಸಹಾಯಕ ಜೆಡಿಯು ಸಚಿವ ಶ್ರವಣ್ ಕುಮಾರ್ ತಳ್ಳಿಹಾಕಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಎನ್‌ಡಿಎಯನ್ನು ಮುನ್ನಡೆಸುತ್ತಾರೆ ಮತ್ತು ಬಿಹಾರದಲ್ಲಿ ಮೈತ್ರಿಕೂಟದ ಮುಖವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಪುನರುಚ್ಚರಿಸಿದ್ದಾರೆ.
ಆರ್‌ಜೆಡಿ ಮುಖ್ಯ ಸಚೇತಕ ಅಖ್ತರುಲ್ ಇಸ್ಲಾಂ ಶಾಹಿನ್, ಧನಕರ್ ಅವರ ನಿರ್ಗಮನವು ನಿತೀಶ್ ಕುಮಾರ್ ಅವರನ್ನು ಬಿಹಾರದ ರಾಜಕೀಯದಿಂದ ತೆಗೆದುಹಾಕುವ ಪ್ರಯತ್ನವಾಗಿದ್ದು, ಇದು ಅವರಿಗೆ ನೀಡಬಹುದಾದ ಖಾಲಿ ಸ್ಥಾನವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.
'ನಿತೀಶ್ ಕುಮಾರ್ ಅವರನ್ನು ರಾಜ್ಯ ರಾಜಕೀಯದಿಂದ ದೂರ ಉಳಿಸಲು ಮತ್ತು ತನ್ನದೇ ಆದ ಮುಖ್ಯಮಂತ್ರಿಯನ್ನು ನೇಮಿಸಲು ಬಿಜೆಪಿ ಬಹಳ ದಿನಗಳಿಂದ ಬಯಸುತ್ತಿದೆ. ಚುನಾವಣೆಗೆ ಮುನ್ನವೇ ಅವರು ಹತಾಶರಾಗಿದ್ದು, ಎನ್‌ಡಿಎ ಸೋಲು ಸನ್ನಿಹಿತವಾಗಿದೆ' ಎಂದು ಶಾಹಿನ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
'ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ನಿತೀಶ್ ಅವರನ್ನು ಉಪ ಪ್ರಧಾನಿಯನ್ನಾಗಿ ಮಾಡುವಂತೆ ಸೂಚಿಸಿದ್ದರು. ಆದ್ದರಿಂದ, ನಿತೀಶ್ ಅವರನ್ನು ರಾಜಕೀಯವಾಗಿ ಅಪ್ರಸ್ತುತ ಸ್ಥಾನಕ್ಕೆ ತಳ್ಳುವ ಬಿಜೆಪಿ ತಂತ್ರದ ಭಾಗವಾಗಿಯೇ ಧನಕರ್ ಅವರ ರಾಜೀನಾಮೆ ಬಂದಿದೆ' ಎಂದು ಅವರು ಹೇಳಿದರು.
2022ರಲ್ಲಿ ಲೋಕಸಭೆಯಲ್ಲಿ ಬಹುಮತ ಹೊಂದಿದ್ದ ಬಿಜೆಪಿ ಅವರಿಗೆ ಅವಕಾಶ ನೀಡಲು ನಿರಾಕರಿಸಿದ ನಂತರ, ನಿತೀಶ್ ಕುಮಾರ್ ಅವರು ಉಪ ರಾಷ್ಟ್ರಪತಿ ಹುದ್ದೆಗೆ ಲಾಬಿ ನಡೆಸಿ ಎನ್‌ಡಿಎ ತೊರೆದರು ಎಂಬ ದಿವಂಗತ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು.
2022 ರಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡರು ಮತ್ತು ಜೆಡಿಯು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಆದರೂ, 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅವರು ಎನ್‌ಡಿಎಗೆ ಮರಳಿದರು ಮತ್ತು ಅಂದಿನಿಂದ ಅವರ ಪಕ್ಷವು ಕೇಂದ್ರದಲ್ಲಿ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿದೆ.
ಜೆಡಿ(ಯು)ನ ಶ್ರವಣ್ ಕುಮಾರ್ ಆರ್‌ಜೆಡಿಯ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. 'ನಿತೀಶ್ ಕುಮಾರ್ ಬಿಹಾರ ತೊರೆಯುವ ಪ್ರಶ್ನೆಯೇ ಇಲ್ಲ. ಅವರು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಮುನ್ನಡೆಸುತ್ತಾರೆ, ಗೆಲುವು ಸಾಧಿಸುತ್ತಾರೆ ಮತ್ತು ರಾಜ್ಯದ ಜನರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತಾರೆ' ಎಂದು ಹೇಳಿದರು.
ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಸೋಮವಾರ ಸಂಜೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾದ ಅವರ ರಾಜೀನಾಮೆ ತಕ್ಷಣವೇ ಜಾರಿಗೆ ಬಂದಿತು.