ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ಶಾಲಾ ಕಟ್ಟಡದಿಂದ ವಿದ್ಯಾರ್ಥಿನಿ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ವಿಡಿಯೋ ವೈರಲ್ ಆಗುತ್ತಿದೆ.
ಅಹಮದಾಬಾದ್‌ನ ನವರಂಗಪುರದಲ್ಲಿರುವ ಸೋಮ್ ಲಲಿತ್ ಶಾಲೆಯಲ್ಲಿಈ ಘಟನೆ ನಡೆದಿದ್ದು, 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ್ದಾಳೆ.
ಈ ಘಟನೆ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ತುಂಬಾ ಸಾಮಾನ್ಯವಾಗಿ ಶಾಲೆಯ 4ನೇ ಅಂತಸ್ತಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಕೈಯಲ್ಲಿ ಕೀಚೈನ್ ತಿರುಗಿಸುತ್ತಾ ಬಾಲ್ಕನಿ ಬಳಿ ಬಂದು ನೋಡ ನೋಡುತ್ತಲೇ ಕಬ್ಬಿಣದ ತಡೆಗೋಡೆ ಮೇಲೇರಿ ಕೆಳಗೆ ಹಾರಿದ್ದಾಳೆ.
ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ.
ಶಿಕ್ಷಣಾಧಿಕಾರಿ ದೌಡು
ಇನ್ನು ಈ ವಿಚಾರ ತಿಳಿಯುತ್ತಲೇ ಜಿಲ್ಲಾ ಶಿಕ್ಷಣ ಅಧಿಕಾರಿ ಸ್ಥಳಕ್ಕೆ ದೌಡಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿಲ್ಲ ಎಂದು ಹೇಳಲಾಗಿದೆ.
ಅನಾರೋಗ್ಯಕ್ಕೆ ತುತ್ತಾಗಿದ್ದ ವಿದ್ಯಾರ್ಥಿನಿ
ಇನ್ನು ಶಾಲಾ ಮೂಲಗಳ ಪ್ರಕಾರ ಮೃತ ವಿದ್ಯಾರ್ಥಿನಿ ಕಳೆದ 15 ದಿನಗಳಿಂದಷ್ಟೇ ಶಾಲೆಗೆ ಬಂದಿದ್ದಳು. ಆಕೆ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಆಕೆಯ ಪೋಷಕು ಶಾಲೆಗೆ ರಜೆ ಹಾಕಿಸಿದ್ದರು. ಒಂದು ತಿಂಗಳ ಬಳಿಕ ಆಕೆ ಶಾಲೆಗೆ ಮರಳಿದ್ದಳು. ಆದರೆ ಗುರುವಾರ ಶಾಲೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಾಲಾ ಸಿಬ್ಬಂದಿ ಹೇಳಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿನಿ ಈ ಕ್ರಮ ಕೈಗೊಂಡ ಕಾರಣ ಏನು? ನವರಂಗಪುರ ಪೊಲೀಸರು ಅದರ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆದಾಗ್ಯೂ, ಇನ್ನೂ ಯಾವುದೇ ನಿರ್ದಿಷ್ಟ ಕಾರಣ ಕಂಡುಬಂದಿಲ್ಲ. ಪೊಲೀಸರು ಸಗಿರಾ ಅವರ ಸಾಮಾಜಿಕ ಮಾಧ್ಯಮ ಖಾತೆ ಮತ್ತು ಅವರೊಂದಿಗೆ ಓದುತ್ತಿರುವ ವಿದ್ಯಾರ್ಥಿಗಳನ್ನು ಪ್ರಶ್ನಿಸಲಿದ್ದಾರೆ.