ನವದೆಹಲಿ: ಅಶ್ಲೀಲ ಕಂಟೆಂಟ್ ಪ್ರಸಾರ, ಪ್ರಚಾರ ಮಾಡುತ್ತಿವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ULLU, ALTBalaji ಸೇರಿ 25 ಒಟಿಟಿಗಳಿಗೆ ನಿಷೇಧ ಹೇರಿದೆ.
ಹೌದು.. ಅಶ್ಲೀಲ ಕಂಟೆಂಟ್ ಅನ್ನು ಮಾತ್ರವೇ ಪ್ರಸಾರ, ಪ್ರಚಾರ ಮಾಡುವ ಹಲವಾರು ಒಟಿಟಿಗಳು ಅಪ್ಲಿಕೇಶನ್ ಗಳನ್ನು ಕೇಂದ್ರ ಸರ್ಕಾರ ಶುಕ್ರವಾರ ನಿಷೇಧಿಸಿದೆ. ಈ ಪೈಕಿ ULLU, ALTBalaji ಆ್ಯಪ್ ಗಳೂ ಸೇರಿವೆ ಎನ್ನಲಾಗಿದೆ. ಈ ಎರಡೂ ಓಟಿಟಿಗಳು ಸೇರಿ ಬರೋಬ್ಬರಿ 25 ಒಟಿಟಿ ಮತ್ತು ಅಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆದೇಶ ಹೊರಡಿಸಿದೆ.
ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಭಾರತದ ಟಾಪ್ 10 ಒಟಿಟಿಗಳಲ್ಲಿ ಸ್ಥಾನ ಪಡೆದಿದ್ದವು ಆದರೆ ಈಗ ಅವುಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.
ಈ ಒಟಿಟಿಗಳು ಭಾರತದ ಪ್ರಸಾರ ಕಾಯ್ದೆಯನ್ನು ಉಲ್ಲಂಘಿಸಿ ಅಶ್ಲೀಲ ಕಂಟೆಂಟ್ ಅನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿವೆ ಎಂಬ ಕಾರಣ ನೀಡಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು 25 ಒಟಿಟಿಗಳ ಮೇಲೆ ನಿಷೇಧ ಹೇರಿದೆ.
ಈ ಅಪ್ಲಿಕೇಶನ್, ಒಟಿಟಿಗಳು ಪ್ರಸ್ತುತ ಭಾರತದಲ್ಲಿ ಮಾತ್ರವೇ ನಿಷೇಧಗೊಳ್ಳಲಿವೆ. ಭಾರತದ ಹೊರಗೆ ಈ ಒಟಿಟಿಗಳು ಕಾರ್ಯ ನಿರ್ವಹಿಸಲಿವೆ ಎಂದು ಹೇಳಲಾಗಿದೆ.
ನಿರ್ಮಾಪಕಿ ಏಕ್ತಾಕಪೂರ್ ಗೆ ಆಘಾತ
ಈಗ ಬ್ಯಾನ್ ಆಗಿರುವ ಒಟಿಟಿಗಳಲ್ಲಿ ಖ್ಯಾತ ನಿರ್ಮಾಪಕಿ, ಟಿವಿ ಲೋಕದ ದೊರೆ ಎಂದೇ ಕರೆಯಲಾಗುವ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಸಹ ಇದೆ. ಈ ಹಿಂದೆಯೂ ಸಹ ಏಕ್ತಾ ಒಡೆತನದ ಆಲ್ಟ್ ಬಾಲಾಜಿ ಒಟಿಟಿಯ ಕಂಟೆಂಟ್ಗಳ ಮೇಲೆ ದೂರುಗಳು ದಾಖಲಾಗಿದ್ದವು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಒಮ್ಮೆಲೆ ನಿಷೇಧ ಹೇರಲಾಗಿದೆ. ಏಕ್ತಾ ಮತ್ತು ಇತರೆ ಒಟಿಟಿಗಳವರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.
ಅಶ್ಲೀಲ ಕಂಟೆಂಟ್ ಪ್ರಸಾರ ಮಾಡುವುದಕ್ಕೇ ಜನಪ್ರಿಯವಾಗಿದ್ದ ಉಲ್ಲು, ಆಲ್ಟ್ ಬಾಲಾಜಿ, ಬಿಗ್ ಶಾಟ್ಸ್, ಜಲ್ವಾ ಆಪ್, ದೇಸಿ ಫ್ಲಿಕ್ಸ್, ಹಾಟ್ ಎಕ್ಸ್ ವಿಐಪಿ, ಅಡ್ಡಾ ಟಿವಿ, ನವರಸ ಲೈಟ್, ಗುಲಾಬ್ ಆಪ್, ಮೂಡ್ ಎಕ್ಸ್, ಹಲ್ಚಲ್ ಆಫ್, ಮೋಜ್ಫ್ಲಿಕ್ಸ್, ಬೂಮೆಕ್ಸ್, ಶೋ ಎಕ್ಸ್, ಬುಲ್ ಆಪ್, ಕಂಗನಾ ಆಪ್ ಇನ್ನೂ ಕೆಲವು ಅಪ್ಲಿಕೇಶನ್ ಮತ್ತು ಒಟಿಟಿಗಳನ್ನು ಸರ್ಕಾರ ನಿಷೇಧ ಮಾಡಿದೆ.
ಸರ್ಕಾರದ ಕಟ್ಟುನಿಟ್ಟಿನ ಕ್ರಮ
ಭಾರತದಲ್ಲಿ ಈ ವೆಬ್‌ಸೈಟ್‌ಗಳಿಗೆ ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲು ಅಥವಾ ತೆಗೆದುಹಾಕಲು ಸರ್ಕಾರ ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ (ISP ಗಳಿಗೆ) ಸ್ಪಷ್ಟವಾಗಿ ನಿರ್ದೇಶನ ನೀಡಿದೆ. MIB, ISP ಗಳ ಅನುಸರಣೆಗೆ ಅನುಕೂಲವಾಗುವಂತೆ ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯ ನಿರ್ದೇಶಕರಿಗೆ (DS-II) ಸಹ ತಿಳಿಸಿದೆ.
ಕಾನೂನು ಏನು ಹೇಳುತ್ತೆ?
ಸರ್ಕಾರ ಈ ನಿರ್ಧಾರ ತಗೊಳ್ಳೋಕೆ ಕೆಲವು ಮುಖ್ಯ ಕಾನೂನುಗಳನ್ನು ಆಧಾರವಾಗಿ ಇಟ್ಟುಕೊಂಡಿದೆ. ಅವುಗಳಲ್ಲಿ ಪ್ರಮುಖವಾದವು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021. ಈ ನಿಯಮಗಳ ಪ್ರಕಾರ, ಯಾವುದೇ ಇಂಟರ್ನೆಟ್ ಮಧ್ಯವರ್ತಿಗಳು (ಅಂದ್ರೆ, ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು) ಕಾನೂನುಬಾಹಿರ ವಿಷಯಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಇಡಬಾರದು, ಪ್ರಕಟಿಸಬಾರದು ಅಥವಾ ಹಂಚಬಾರದು.
ಒಂದು ವೇಳೆ ಅಂತಹ ಮಾಹಿತಿ ಇದೆ ಅಂತ ಸರ್ಕಾರ ತಿಳಿಸಿದರೆ, ತಕ್ಷಣ ಅದನ್ನ ತೆಗೆದುಹಾಕೋದು ಅವರ ಜವಾಬ್ದಾರಿ. ಹಾಗೆ ಮಾಡದೇ ಇದ್ರೆ, ಅವರಿಗೆ ಕಾನೂನು ಕ್ರಮ ಎದುರಿಸಬೇಕಾಗುತ್ತೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.