ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಎರಡೂ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ 'ನೇರ ಮಾತುಕತೆ'ಯ ಪರಿಣಾಮವಾಗಿ ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂದು ಕೇಂದ್ರ ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ.
'ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದಲ್ಲಿ ಅಮೆರಿಕದ ಹಸ್ತಕ್ಷೇಪ ಇರುವುದು ಸತ್ಯವೇ' ಎಂದು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವಾಲಯ(MEA) ಇಂದು ಲಿಖಿತ ಉತ್ತರ ನೀಡಿದೆ.
ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು, ಪಾಕಿಸ್ತಾನ ಮೊದಲು ಕದನ ವಿರಾಮದ ಬಗ್ಗೆ ಪ್ರಸ್ತಾಪ ಮಾಡಿತು ಎಂದು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಮೇ 10 ರಂದು 'ಎರಡೂ ರಾಷ್ಟ್ರಗಳ DGMOs ನಡುವಿನ ನೇರ ಮಾತುಕತೆಯ ಪರಿಣಾಮವಾಗಿ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡಿವೆ ಎಂದು ಹೇಳಿದರು.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಮಾಡುವ ವಿಷಯದಲ್ಲಿ ಭಾರತವು 'ಮೇ 08 ರಂದು ಮುಖ್ಯ ಗುರಿ ಸಾಧಿಸಿದೆ' ಎಂದು ಅವರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಏಪ್ರಿಲ್ 22 ರಿಂದ ಮೇ 10 ರ ನಡುವೆ, 'ಅಮೆರಿಕ ಸೇರಿದಂತೆ ವಿವಿಧ ಹಂತಗಳಲ್ಲಿ ವಿವಿಧ ದೇಶಗಳೊಂದಿಗೆ ಹಲವಾರು ರಾಜತಾಂತ್ರಿಕ ಸಂಭಾಷಣೆಗಳು ನಡೆದಿವೆ' ಎಂದು ಸಚಿವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
'ಅಮೆರಿಕಕ್ಕೆ ನಿರ್ದಿಷ್ಟವಾಗಿ ಹೇಳುವುದಾದರೆ, ಪಾಕಿಸ್ತಾನ ದೊಡ್ಡ ದಾಳಿ ನಡೆಸಿದರೆ ಅದಕ್ಕೆ ಭಾರತವು 'ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ' ಎಂದು ಮೇ 9 ರಂದು ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರಿಗೆ ತಿಳಿಸಲಾಯಿತು. ಸಂಘರ್ಷಕ್ಕೆ ಸಂಬಂಧಿಸಿದ ಸಂಭಾಷಣೆಗಳ ಸಂದರ್ಭದಲ್ಲಿ ನಮ್ಮ ವ್ಯಾಪಾರದ ವಿಷಯ ಬಂದಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.