ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ ನನ್ನ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿ, ಗರ್ಭಿಣಿಯಾದಾಗ ಬಲವಂತದಿಂದ ಗರ್ಭಪಾತ ಮಾಡಿಸಲಾಗಿದೆ ಎಂದು ಆರೋಪಿಸಿ ಎಚ್‌ಐವಿ ಸೋಂಕಿತ ಬಾಲಕಿ ನೀಡಿದ ದೂರಿನ ಮೇರೆಗೆ ಶುಕ್ರವಾರ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಧರಾಶಿವ್ ಜಿಲ್ಲೆಯ ಧೋಕಿ ಪೊಲೀಸ್ ಠಾಣೆಯಲ್ಲಿ ಬಾಲಕಿ ನೀಡಿದ ದೂರಿನ ಪ್ರಕಾರ, ಈ ಘಟನೆಗಳು ಜುಲೈ 13, 2023 ರಿಂದ ಈ ವರ್ಷದ ಜುಲೈ 23 ರ ನಡುವೆ ಹಸೇಗಾಂವ್‌ನಲ್ಲಿರುವ ಎಚ್‌ಐವಿ ಸೋಂಕಿತ ಮಕ್ಕಳ ಆಶ್ರಮ ಕೇಂದ್ರದಲ್ಲಿ ನಡೆದಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ಬಾಲಕಿಯ ದೂರಿನ ಪ್ರಕಾರ, ಆಕೆ ಕಳೆದ ಎರಡು ವರ್ಷಗಳಿಂದ ಸಂಸ್ಥೆಯಲ್ಲಿತ್ತು. ಈ ಮಕ್ಕಳ ಗೃಹದ ಉದ್ಯೋಗಿಯೊಬ್ಬರು ನಾಲ್ಕು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಯಾರಿಗೂ ಈ ವಿಚಾರ ತಿಳಿಸದಂತೆ ಆಕೆಗೆ ಬೆದರಿಕೆ ಹಾಕಿದ್ದಾನೆ. ಸಂಸ್ಥೆಯ ಆಡಳಿತ ಮಂಡಳಿಯು ಆಕೆಗೆ ಸಹಾಯ ಮಾಡಿಲ್ಲ. ಹೀಗಾಗಿ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದು, ಅದನ್ನು ದೂರು ಪೆಟ್ಟಿಗೆಯಲ್ಲಿ ಹಾಕಿದ್ದಾಳೆ" ಎಂದು ಅವರು ಹೇಳಿದ್ದಾರೆ.
ಆಕೆ ಅಸ್ವಸ್ಥಳಾದ ನಂತರ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ. ನಂತರ ಆರೋಪಿಯು ವೈದ್ಯರ ಒಪ್ಪಿಗೆಯಿಲ್ಲದೆ ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸಂಸ್ಥೆಯ ಸ್ಥಾಪಕ ಮತ್ತು ಸೂಪರಿಂಟೆಂಡೆಂಟ್, ಆಕೆಯ ಮೇಲೆ ಅತ್ಯಾಚಾರ ಎಸಗಿದ ಉದ್ಯೋಗಿ ಮತ್ತು ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಸೇರಿದಂತೆ ಆರು ಜನರ ವಿರುದ್ಧ ಧೋಕಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.