ಆನಂದ್: ಗುಜರಾತ್‌ನಲ್ಲಿ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪಕ್ಷದ ಜಿಲ್ಲಾ ಘಟಕದ ಮುಖ್ಯಸ್ಥರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಭರವಸೆ ನೀಡಿದ್ದಾರೆ.
ಇಂದು 'ಸಂಘಟನ್ ಸುಜನ್ ಅಭಿಯಾನ್'(ಪಕ್ಷ ಸಂಘಟನೆಯನ್ನು ಬಲಪಡಿಸುವ ಅಭಿಯಾನ) ಅಡಿಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ತರಬೇತಿ ಶಿಬಿರದಲ್ಲಿ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗವು "ಪಕ್ಷಪಾತ" ದಿಂದ ವರ್ತಿಸುತ್ತಿದೆ ಎಂದು ಟೀಕಿಸಿದರು ಮತ್ತು ಬಿಜೆಪಿಯನ್ನು ಅದರ "ಭದ್ರ ಕೋಟೆ" ಗುಜರಾತ್‌ನಲ್ಲಿಯೇ ಸೋಲಿಸುವುದು ಮುಖ್ಯ ಎಂದು ಪ್ರತಿಪಾದಿಸಿದರು.
2027 ರ ರಾಜ್ಯ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಆನಂದ್ ನಗರ ಬಳಿಯ ರೆಸಾರ್ಟ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಹೊಸದಾಗಿ ನೇಮಕಗೊಂಡ ಅಧ್ಯಕ್ಷರಿಗಾಗಿ ಪಕ್ಷ ತರಬೇತಿ ಶಿಬಿರ ಆಯೋಜಿಸಿದೆ.
ಪಕ್ಷದ ಮಿಷನ್ 2027 ಗಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಈ ಶಿಬಿರವು ಜುಲೈ 28 ರಂದು ಮುಕ್ತಾಯಗೊಳ್ಳಲಿದೆ.
ರಾಹುಲ್ ಗಾಂಧಿ ಅವರು ಜಿಲ್ಲಾಧ್ಯಕ್ಷರಿಗೆ ಮಾರ್ಗದರ್ಶನ ನೀಡಿದರು ಮತ್ತು ನಾಯಕತ್ವವು ಪಕ್ಷದ ಕಾರ್ಯಕರ್ತರೊಂದಿಗೆ ಸಂಪೂರ್ಣವಾಗಿ ಇದೆ ಎಂದು ಭರವಸೆ ನೀಡಿದರು ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ಅವರು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
"ಜನರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುವಂತೆ ರಾಹುಲ್ ಗಾಂಧಿ ನಮ್ಮನ್ನು ಕೇಳಿಕೊಂಡರು. ವಿವಿಧ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ನಗರ ಮತ್ತು ಜಿಲ್ಲಾ ಘಟಕದ ಮುಖ್ಯಸ್ಥರೊಂದಿಗೆ ಸಮಾಲೋಚಿಸಲಾಗುವುದು ಎಂದು ಅವರು ಭರವಸೆ ನೀಡಿದರು" ಎಂದು ರಾಜ್‌ಕೋಟ್ ಕಾಂಗ್ರೆಸ್ ಮುಖ್ಯಸ್ಥ ರಾಜ್‌ದೀಪ್‌ಸಿನ್ಹ ಜಡೇಜಾ ಅವರು ಹೇಳಿದರು.
ಕೇಂದ್ರ ಚುನಾವಣಾ ಆಯೋಗ "ಪಕ್ಷಪಾತಿ ಅಂಪೈರ್". ಅದಕ್ಕಾಗಿಯೇ ಕಾಂಗ್ರೆಸ್ ಚುನಾವಣೆಗಳಲ್ಲಿ ಸೋಲುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು ಎಂದು ಮತ್ತೊಬ್ಬ ನಾಯಕ ತಿಳಿಸಿದ್ದಾರೆ.