ಬಿಹಾರ: ಮೊಬೈಲ್ ಫೋನ್ ಕದ್ದ ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನ ಪುಟ್ ಬೋರ್ಡ್ ನಲ್ಲಿ ನಿಂತು ನೇತಾಡಿದ್ದು, ಬಳಿಕ ಸೇತುವೆಯೊಂದನ್ನು ದಾಟುತ್ತಿದ್ದಂತೆಯೇ ಜಿಗಿದಿದ್ದಾನೆ.
ಬಿಹಾರದ ಮುಂಗೇರ್ ಬಳಿ ಭಾಗಲ್ಪುರ್-ಮುಜಾಫರ್‌ಪುರ ಜನಸೇವಾ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಈ ನಾಟಕೀಯ ಕಳ್ಳತನ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಲಿಸುತ್ತಿದ್ದ ರೈಲಿನ ಕೆಳಗಿನ ಫುಟ್‌ಬೋರ್ಡ್‌ನಲ್ಲಿ ನಿಂತ ಆರೋಪಿ ನೇತಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಒಂದು ಹಂತದಲ್ಲಿ ಸಹ ಪ್ರಯಾಣಿಕರು ಬೆಲ್ಟ್ ನಿಂದ ಆತನಿಗೆ ಥಳಿಸಲು ಪ್ರಯತ್ನಿಸಿದ್ದಾರೆ. ತನ್ನನ್ನು ಹೋಗಲು ಬಿಡದಿದ್ದರೆ ಸಹ ಪ್ರಯಾಣಿಕರ ಕಾಲು ಎಳೆಯುವುದುವಾಗಿ ಆರೋಪಿ ಬೆದರಿಕೆ ಹಾಕಿದ್ದಾನೆ.
ನಂತರ ರೈಲು ಸೇತುವೆಯೊಂದನ್ನು ದಾಟುತ್ತಿದ್ದಂತೆಯೇ ಪೊದೆಗಳಿಗೆ ರೈಲಿನಿಂದ ಜಿಗಿದು ಪರಾರಿಯಾಗಿದ್ದಾನೆ.
ಈ ವಿಡಿಯೋ ಗಮನಕ್ಕೆ ಬಂದಿದ್ದು, ರೈಲ್ವೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ಕುರಿತು ಪರಿಶೀಲಿಸುತ್ತಿದ್ದೇವೆ. ಆರೋಪಿಯ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಜಮಲ್ ಪುರ ರೈಲ್ವೆ ಎಸ್ ಪಿ ರಮಣ್ ಚೌಧರಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ದರೋಡೆ, ಕಳ್ಳತನ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಹೆಚ್ಚಿನ ಭದ್ರತೆ ಒದಗಿಸಬೇಕು ಮತ್ತು ಸುರಕ್ಷಿತ ಪ್ರಯಾಣಕ್ಕೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.