ಕಾಶ್ಮೀರ: ಮಹತ್ವದ ಬೆಳವಣಿಗೆಯೊಂದರಲ್ಲಿ ಸೇನೆಯ ಆಯ್ದ ಪ್ಯಾರಾ ಕಮಾಂಡೋಗಳು ಸೋಮವಾರ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಉಗ್ರನನ್ನು ಹೊಡೆದುರುಳಿಸಿದ್ದಾರೆ.
ಸುಲೇಮಾನ್ ಸೇರಿದಂತೆ ಮೂವರು ಉಗ್ರರು ಹತ: ಶ್ರೀನಗರದ ಹೊರವಲಯದ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಏಪ್ರಿಲ್ 22ರ ದಾಳಿಯ ಮಾಸ್ಟರ್ ಮೈಂಡ್ ಸುಲೇಮಾನ್ ಆಲಿಯಾಸ್ ಆಸೀಫ್ ನನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಆತನ ಇಬ್ಬರು ಸಹಚರರು ಕೂಡಾ ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಯ ಸಂಚುಕೋರರು ಬಳಸಿದ ಸ್ಯಾಟ್ ಲೈಟ್ ಫೋನ್ ಸಿಗ್ನಲ್ ಸೂಚನೆ ನಂತರ 'ಆಪರೇಷನ್ ಮಹಾದೇವ್' ಶೋಧ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಸುಲೈಮಾನ್ ಜೊತೆಗೆ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಇತರ ಇಬ್ಬರನ್ನು ಜಿಬ್ರಾನ್ ಮತ್ತು ಹಮ್ಜಾ ಅಪ್ಘಾನಿ ಎಂದು ಗುರುತಿಸಲಾಗಿದೆ.
ಜಿಬ್ರಾನ್ ಕಳೆದ ವರ್ಷ ನಡೆದ ಸೊನಾಮಾರ್ಗ್ ಸುರಂಗ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಯಾಗಿದ್ದಾನೆ. ಈ ದಾಳಿಯಲ್ಲಿ ಡಾಕ್ಟರ್ ಒಬ್ಬರು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರು.
ಈ ಪ್ರದೇಶದಲ್ಲಿ ಮತ್ತೊಂದು ಉಗ್ರರ ಗುಂಪು ಇರುವ ಬಗ್ಗೆ ದೊರೆತ ಗುಪ್ತಚರ ಮಾಹಿತಿ ಆಧಾರದ ಮೇಲೆ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಎನ್ ಕೌಂಟರ್ ಸ್ಥಳದಲ್ಲಿ ಒಂದು MA ಕಾರ್ಬೈನ್ ರೈಫಲ್, ಎರಡು AK ರೈಫಲ್ಸ್ ಮತ್ತಿತರ ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಉಗ್ರರ ಮೃತದೇಹಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಗ್ಗೆ 11-30ರ ಸುಮಾರಿನಲ್ಲಿ 24 ರಾಷ್ಟ್ರೀಯ ರೈಫಲ್ಸ್ ಮತ್ತು 4 ಪ್ಯಾರಾ ಯೂನಿಟ್ ನ ಸಿಬ್ಬಂದಿ ಮೂವರು ಉಗ್ರರನ್ನು ಗುರುತಿಸಿದ್ದು, ಕೊನೆಯ ಉಗ್ರ ಸಾಯುವವರೆಗೂ ಸುಮಾರು ಹೊತ್ತು ಕಾರ್ಯಾಚರಣೆ ನಡೆಸಲಾಯಿತು ಎಂದು ಕಾಶ್ಮೀರ ವಲಯದ ಐಜಿಪಿ ವಿಕೆ ವಿ ಕೆ ಬಿರ್ಡಿ ಹೇಳಿದ್ದಾರೆ.
ಇದಕ್ಕೂ ಮುನ್ನಾ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿತ್ತು. ಆಪರೇಷನ್ ಮಹಾದೇವ್ ಕಾರ್ಯಾಚರಣೆಯಡಿ ಮೂವರು ಉಗ್ರರನ್ನು ಹತ್ಯೆಗೈದಿರುವುದಾಗಿ ಹೇಳಿಕೊಂಡಿತ್ತು.