ನವದೆಹಲಿ: ಲಕ್ಷ್ಮಣ ರೇಖೆ ದಾಟಿದ ರಾವಣನ ಲಂಕೆಯ ದಹನವಾದಂತೆ ಭಾರತ ಎಳೆದ ಗೆರೆಯನ್ನು ಪಾಕಿಸ್ತಾನ ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೂ ಬೆಂಕಿ ಬಿದ್ದಿತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸೋಮವಾರ ಹೇಳಿದ್ದಾರೆ.
ಲೋಕಸಭೆಯಲ್ಲಿಂದು ಭಾರತೀಯ ಸೇನೆ ಪಾಕಿಸ್ತಾನ ಉಗ್ರರ ಶಿಬಿರಗಳ ಮೇಲೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆ ನಡೆಯಲಿದ್ದು, ಸಭೆ ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಜ್ಜಾಗಿದ್ದಾರೆ.
ಈ ನಡುವೆ ‘ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಿದ್ದೇ ನಾನು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳುತ್ತಿದ್ದು, ಈ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.
ಇದರ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ರಾಮಾಯಣದ ಲಂಕಾ ದಹನಕ್ಕೆ ಹೋಲಿಕೆ ಮಾಡಿದ್ದಾರೆ.
ಆಪರೇಷನ್ ಸಿಂಧೂರ ಕುರಿತ ಇಂದು ಚರ್ಚೆ ಆರಂಭವಾಗಲಿದೆ. ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು ಎಂದು ಬರೆದುಕೊಂಡಿದ್ದಾರೆ.