ನವದೆಹಲಿ: "ಆಪರೇಷನ್ ಸಿಂಧೂರ್ ಆರಂಭವಾದ ಕ್ಷಣ, ವಾಸ್ತವವಾಗಿ ಅದು ಪ್ರಾರಂಭವಾಗುವ ಮೊದಲೇ, ಎಲ್ಲಾ ವಿರೋಧ ಪಕ್ಷಗಳು ಭದ್ರತಾ ಪಡೆಗಳೊಂದಿಗೆ ಮತ್ತು ಭಾರತದ ಚುನಾಯಿತ ಸರ್ಕಾರದೊಂದಿಗೆ ಬಂಡೆಯಂತೆ ನಿಲ್ಲುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಇಂದು ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, "ರಾಷ್ಟ್ರಿಯ ಭದ್ರತೆ ವಿಚಾರದಲ್ಲಿ ಗಂಭೀರ ಹಾಗೂ ದೀರ್ಘಕಾಲೀನ ನೀತಿ ಅಗತ್ಯವಿದೆ. ಪ್ರತಿಕ್ರಿಯಾತ್ಮಕ ಹಾಗೂ ರಾಜಕೀಯ ಪ್ರೇರಿತ ಕ್ರಮಗಳು ಅನುಕೂಲಕರವಲ್ಲ" ಎಂದರು.
ಉಗ್ರರ ವಿರುದ್ದ ಸೇನೆ ನಡೆಸುವ ಕಾರ್ಯಚರಣೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಲೋಕಸಭೆ ಪ್ರತಿಪಕ್ಷದ ನಾಯಕ ಆರೋಪಿಸಿದರು.
ಸಶಸ್ತ್ರ ಪಡೆಗಳನ್ನು ರಾಷ್ಟ್ರೀಯ ಹಿತಾಸಕ್ತಿಗಾಗಿ ಮತ್ತು ಸಂಪೂರ್ಣ "ಸ್ವಾತಂತ್ರ್ಯದೊಂದಿಗೆ" ಬಳಸಬೇಕು. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಷ್ಠೆಯನ್ನು "ರಕ್ಷಿಸಲು" ಅಲ್ಲ, ಇದು "ದೇಶಕ್ಕೆ ಅಪಾಯಕಾರಿ" ಎಂದು ರಾಹುಲ್ ಗಾಂಧಿ ಕರೆದರು.
ಮೋದಿಗೆ ಧೈರ್ಯವಿದ್ದರೆ ಟ್ರಂಪ್ ಸುಳ್ಳುಗಾರ ಎಂದು ಹೇಳಲಿ
ನನ್ನ ಮಧ್ಯಸ್ಥಿಕೆಯಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 29 ಬಾರಿ ಹೇಳಿದ್ದಾರೆ. ಸರಿ, ಅವರು ಸುಳ್ಳು ಹೇಳುತ್ತಿದ್ದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಇದನ್ನು ಸ್ಪಷ್ಟಪಡಿಸಲಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದರು.
"ನೀವು ಸುಳ್ಳು ಹೇಳುತ್ತಿದ್ದೀರಿ. ಪ್ರಧಾನಿ ಮೋದಿಗೆ ಇಂದಿರಾ ಗಾಂಧಿಯವರಂತೆ ಧೈರ್ಯವಿದ್ದರೆ, ಅವರು ಇಲ್ಲಿ ನಿಂತು ಡೊನಾಲ್ಡ್ ಟ್ರಂಪ್, ನೀವು ಸುಳ್ಳುಗಾರ ಎಂದು ಹೇಳಲಿ" ಎಂದು ಸವಾಲು ಹಾಕಿದರು.