ತಿರುವನಂತಪುರಂ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು ಅಂತಹುದೇ ಮತ್ತೊಂದು ಘಟನೆ ಕೇರಳದಲ್ಲಿ ವರದಿಯಾಗಿದೆ.
ಕೇರಳದಲ್ಲಿ ಬಸ್ ನಲ್ಲಿ ಚಲಿಸುತ್ತಿದ್ದ ಯುವತಿಗೆ ಆಕೆಯ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಯುವತಿ ಎಲ್ಲರೆದುರು ಬಸ್ ನಲ್ಲೇ ಆ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬಸ್ ನಲ್ಲಿ ತನ್ನ ಸೀಟ್ ಪಕ್ಕ ಬಂದು ಕುಳಿತ ಹಿರಿಯ ವ್ಯಕ್ತಿ ನಿಧಾನವಾಗಿ ತನ್ನ ಕೈಯನ್ನು ಯುವತಿಯ ಎದೆ ಹತ್ತಿರ ತಂದು ಇರಿಸಿದ್ದಾನೆ. ಆರಂಭದಲ್ಲಿ ನಿರ್ಲಕ್ಷಿಸಿದ್ದ ಯುವತಿ ಬಳಿಕ ಆತ ಉದ್ದೇಶಪೂರ್ವಕವಾಗಿಯೇ ಇದನ್ನು ಮಾಡುತ್ತಿದ್ದಾನೆ ಎಂದು ಮನಗಂಡಿದ್ದಾಳೆ. ಕೂಡಲೇ ತನ್ನ ಸ್ನೇಹಿತೆಗೆ ಹೇಳಿ ಆ ಕೃತ್ಯವನ್ನು ಆಕೆಯ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಸಿದ್ದಾಳೆ.
ಬಳಿಕ ವಿಡಿಯೋ ರೆಕಾರ್ಡ್ ಆದ ಬಳಿಕ ಕೂಡಲೇ ಎದ್ದು ನಿಂತು ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ನಿಮ್ಮ ಮನೆಯಲ್ಲಿ ಯಾರೂ ಹೆಣ್ಣುಮಕ್ಕಳಿಲ್ಲವೇ ಎಂದು ಕಿಡಿಕಾರಿದ ಯುವತಿ ವೃದ್ಧ ವ್ಯಕ್ತಿಗೆ ಕಪಾಳ ಮೋಕ್ಷ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ಯುವತಿ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.