ಮುಂಬೈ: 2008 ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಸೇರಿ 7 ಆರೋಪಿಗಳಿಗೆ ಬಿಗ್ ರಿಫೀಲ್ ಸಿಕ್ಕಿದೆ. 17 ವರ್ಷಗಳ ನಂತರ ಸುದೀರ್ಘ ವಿಚಾರಣೆ ನಡೆಸಿದ ನಂತರ ಎನ್‌ಐಎ ವಿಶೇಷ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ.
ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎ.ಕೆ.ಲಾಹೋಟಿ ಅವರು ಪ್ರಕರಣದ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ.
ಈ ಪ್ರಕರಣದಿಂದ ಬಿಜೆಪಿ ಮಾಜಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್, ಮಾಜಿ ಸೇನಾಧಿಕಾರಿ ಪ್ರಸಾದ್ ಪುರೋಹಿತ್ (ನಿವೃತ್ತ), ಮೇಜರ್ ರಮೇಶ್ ಉಪಾಧ್ಯಾಯ(ನಿವೃತ್ತ), ಸುಧಾಕರ್ ಚತುರ್ವೇದಿ, ಅಜಯ್ ರಹೀರ್ಕರ್, ಸುಧಾಕರ್ ಧರ್‌ದ್ವಿವೇದಿ ಅಲಿಯಾಸ್ ಶಂಕರಾಚಾರ್ಯ ಹಾಗೂ ಸಮೀರ್ ಕುಲಕರ್ಣಿ ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.
ಸ್ಫೋಟದಲ್ಲಿ ಮೃತಪಟ್ಟ ಆರು ಜನರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ನ್ಯಾಯಾಲಯ ಹೇಳಿದೆ.
ಸೆಪ್ಟೆಂಬರ್ 29, 2008 ರಂದು ಮಹಾರಾಷ್ಟ್ರದ ಮಾಲೆಗಾಂವ್ ಪಟ್ಟಣದ ಮಸೀದಿಯ ಬಳಿ ಮೋಟಾರ್ ಸೈಕಲ್‌ಗೆ ಕಟ್ಟಲಾಗಿದ್ದ ಸ್ಫೋಟಕ ಸಾಧನವೊಂದು ಸ್ಫೋಟಗೊಂಡಿತ್ತು. ಘಟನೆಯಲ್ಲಿ ಆರು ಜನರು ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.