ಇಂದೋರ್: ಇಲ್ಲಿನ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಬಂಧಿತ ಆರೋಪಿಗೆ ಪ್ರಯಾಣಿಕರೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ.
ನಾಲ್ವರು ಆರೋಪಿಗಳೊಂದಿಗೆ ಮೇಘಾಲಯ ಪೊಲೀಸ್ ತಂಡ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಾಗ ಈ ಘಟನೆ ನಡೆದಿದೆ.
ತನ್ನ ಲಗೇಜ್ ಗಾಗಿ ಕಾಯುತ್ತಿದ್ದಾಗ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಆರೋಪಿಗೆ ಕಪಾಳಕ್ಕೆ ಬಾರಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ಕೊಲೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಆರೋಪಿಗಳು ಮಾಸ್ಕ್ ಧರಿಸಿದ್ದರಿಂದ ಅವರಲ್ಲಿ ಯಾರಿಗೆ ಕಪಾಳಮೋಕ್ಷ ಮಾಡಲಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಯ ವಿಡಿಯೋ ವೈರಲ್ ಆಗಿದೆ.
ಮೇಘಾಲಯ ಪೊಲೀಸರ 12 ಸದಸ್ಯರ ತಂಡವು ನಾಲ್ವರು ಆರೋಪಿಗಳಾದ ರಾಜ್ ಕುಶ್ವಾಹ್, ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಅವರೊಂದಿಗೆ ಶಿಲ್ಲಾಂಗ್‌ಗೆ ತೆರಳಿರುವುದಾಗಿ ಇಂದೋರ್‌ನ ಹೆಚ್ಚುವರಿ ಉಪ ಪೊಲೀಸ್ ಕಮಿಷನರ್ ರಾಜೇಶ್ ದಂಡೋಟಿಯಾ ತಿಳಿಸಿದ್ದಾರೆ.