ವಾಷಿಂಗ್ಟನ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ B-787 ಡ್ರೀಮ್‌ಲೈನರ್ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ಕುರಿತು ವಿಶ್ವದ ನಾಯಕರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತಪಟ್ಟವರ ಕುಟುಂಬಸ್ಥರಿಗೆ ವಿಶ್ವದ ನಾಯಕರು ಸಾಂತ್ವನ ಹೇಳಿದ್ದು, ಭಾರತದ ನೋವಿನಲ್ಲಿ ಸಮಾನ ಭಾಗೀದಾರಿಗಳಾಗಿರುವುದಾಗಿ ತಿಳಿಸಿದ್ದಾರೆ.
ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಬ್ರಿಟನ್‌ನ ಕಿಂಗ್ ಚಾರ್ಲ್ಸ್ 3 ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಕುರಿತು "ದಿ ರಾಯಲ್ ಫ್ಯಾಮಿಲಿ" ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಅಹಮದಾಬಾದ್‌ನಲ್ಲಿ ನಡೆದ ಭಯಾನಕ ಘಟನೆಗಳಿಂದ ನಾನು ಮತ್ತು ನನ್ನ ಪತ್ನಿ ತೀವ್ರವಾಗಿ ಆಘಾತಕ್ಕೊಳಗಾಗಿದ್ದೇವೆ. ಈ ಭಯಾನಕ ದುರಂತವು ಲಂಡನ್ ಮತ್ತು ಭಾರತೀಯ ಪ್ರಜೆಗಳನ್ನೂ ಸೇರಿದಂತೆ, ಹಲವು ರಾಷ್ಟ್ರಗಳ ಪ್ರಯಾಣಿಕರನ್ನು ಬಲಿ ಪಡೆದಿದೆ. ಈ ನೋವಿನಿಂದ ಬಾಧಿತರಾದ ಎಲ್ಲಾ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಮೃತರ ಆಪ್ತರೊಂದಿಗೆ ನಮ್ಮ ವಿಶೇಷ ಪ್ರಾರ್ಥನೆಗಳು ಮತ್ತು ಆಳವಾದ ಸಹಾನುಭೂತಿ ಇದೆ ಎಂದು ಹೇಳಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನಮಂತ್ರಿ ಕೀರ್ ಸ್ಟಾರ್ಮರ್ ಅವರು ಪ್ರತಿಕ್ರಿಯಿಸಿ, "ಭಾರತದ ಅಹಮದಾಬಾದ್ ನಗರದಲ್ಲಿ ಅನೇಕ ಬ್ರಿಟಿಷ್ ಪ್ರಜೆಗಳನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ವಿಮಾನ ಅಪಘಾತಕ್ಕೀಡಾದ ದೃಶ್ಯಗಳು ಭೀಕರವಾಗಿವೆ. ಈ ತೀವ್ರ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಪ್ರಯಾಣಿಕರು ಮತ್ತು ಅವರ ಕುಟುಂಬಗಳೊಂದಿಗೆ ಇವೆ ಎಂದು ಹೇಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕೂಡ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪ್ರೀತಿಪಾತ್ರರಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ.
ಭಾರತದ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತ ನಮ್ಮನ್ನು ತೀವ್ರವಾಗಿ ನೋಯಿಸಿದೆ. ಈ ದುಃಖದ ಸಮಯದಲ್ಲಿ, ಬಲಿಪಶುಗಳ ಪ್ರೀತಿಪಾತ್ರರಿಗೆ ನಾನು ಸಂತಾಪ ಸೂಚಿಸುತ್ತೇನೆಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಟೆಲಿಗ್ರಾಮ್‌ನಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ, "ದಯವಿಟ್ಟು ವಿಮಾನ ಅಪಘಾತದ ಸಂತ್ರಸ್ತರ ಕುಟುಂಬಗಳು ಮತ್ತು ಸ್ನೇಹಿತರಿಗೆ ನನ್ನ ಪ್ರಾಮಾಣಿಕ ಸಹಾನುಭೂತಿ ಮತ್ತು ಬೆಂಬಲವನ್ನು ತಿಳಿಸಿ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವಕು ಪ್ರತಿಕ್ರಿಯಿಸಿ, ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಕಂಬನಿ ಮಿಡಿದಿದ್ದು, "ಈ ವಿನಾಶಕಾರಿ ದುರಂತದ ಸಮಯದಲ್ಲಿ, ಆಸ್ಟ್ರೇಲಿಯಾ ಸಂತ್ರಸ್ತರ ನೋವಿನಲ್ಲಿ ಶಾಮೀಲಾಗಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರು ಪ್ರತಿಕ್ರಿಯಿಸಿ, ಬಾಂಗ್ಲಾದೇಶವು ಈ ದುಃಖದ ಸಮಯದಲ್ಲಿ ಭಾರತ ಮತ್ತು ಭಾರತದ ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ. ಅಪಘಾತದಲ್ಲಿ ಮಡಿದವರ ಕುಟುಂಬದ ನೋವಿನಲ್ಲಿ ನಾವು ಶಾಮೀಲಾಗಿದ್ದೇವೆ ಎಂದು ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿಕ್ರಿಯಿಸಿ, ಏರ್ ಇಂಡಿಯಾ ವಿಮಾನ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಇದು ಭೀಕರ ಅಪಘಾತ. ನಾನು ಈ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಅಮೆರಿಕವು ಅವರ ನೋವಿನಲ್ಲಿ ಭಾಗಿಯಾಗಿದೆ. ಅಪಘಾತದ ತನಿಖೆಯಲ್ಲಿ ಭಾರತಕ್ಕೆ ಯಾವುದೇ ರೀತಿಯ ಸಹಕಾರ ನೀಡಲು ನಾವು ಸಿದ್ಧ ಎಂದು ಹೇಳಿದ್ದಾರೆ.
ಭಾರತ ಒಂದು ಬಲಿಷ್ಠ ದೇಶ ಅವರು ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವಲ್ಲಿ ಸಮರ್ಥರಾಗಿದ್ದಾರೆ. ಆದಾಗ್ಯೂ, ಅವರಿಗೆ ಯಾವುದೇ ಹಂತದಲ್ಲಿ ನೆರವಿನ ಅವಶ್ಯಕತೆ ಬಿದ್ದರೆ, ಅಮೆರಿಕ ಸಾಧ್ಯವಾದ ಎಲ್ಲಾ ಸಹಕಾರವನ್ನೂ ನೀಡಲಿದೆ. ಈ ಕೂಡಲೇ ಒಂದು ತಜ್ಞರ ತಂಡವನ್ನು ಕಳುಹಿಸಲೂ ನಾವು ಸಿದ್ಧ.
ವಿಮಾನ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ, ಅಪಘಾತದ ವಿಡಿಯೋಗಳನ್ನು ನೋಡಿದರೆ ವಿಮಾನದ ಎರಡೂ ಎಂಜಿನ್‌ಗಳು ಏಕ ಕಾಲದಲ್ಲಿ ಶಕ್ತಿಯನ್ನು ಕಳೆದುಕೊಂಡಂತೆ ಕಾಣುತ್ತಿತ್ತು. ಇದು ವಾಯುಯಾನ ಇತಿಹಾಸದಲ್ಲಿ ನಿಜಕ್ಕೂ ಭಯಾನಕ ಅಪಘಾತ ಎಂದು ತಿಳಿಸಿದ್ದಾರೆ.