ಅಹ್ಮದಾಬಾದ್: ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಪೈಕಿ ಒಟ್ಟು 270 ಮೃತದೇಹಗಳನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ತರಲಾಗಿದೆ ಎಂದು ವೈದ್ಯರು ಶನಿವಾರ ತಿಳಿಸಿದ್ದಾರೆ.
ಗುಜರಾತ್ನ ಅಹಮದಾಬಾದ್‌ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು. ವಿಮಾನದಲ್ಲಿ 10 ಸಿಬ್ಬಂದಿ, ಇಬ್ಬರು ಪೈಲಟ್ ಗಳು ಸೇರಿದಂತೆ 242 ಜನರು ಈ ವಿಮಾನದಲ್ಲಿದ್ದರು. ಈ ಪೈಕಿ 241 ಮಂದಿ ಸಾವನ್ನಪ್ಪಿದ್ದಾರೆ.
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಇದ್ದ ಬಿಜೆ ವೈದ್ಯಕೀಯ ಕಾಲೇಜು ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟವಾಗಿತ್ತು.
ಈ ದುರಂತದಲ್ಲಿ ಅಧಿಕಾರಿಗಳು ಈ ಹಿಂದೆ ಸಾವಿನ ಸಂಖ್ಯೆ 265 ಎಂದು ಅಂದಾಜಿಸಿದ್ದರು. ಇದೀಗ ಈ ಸಂಖ್ಯೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ, ನಗರದ ಅಗ್ನಿಶಾಮಕ ದಳವು ವಿಮಾನ ಅಪಘಾತ ಸ್ಥಳದಿಂದ ಒಂದು ಶವ ಮತ್ತು ಕೆಲವು ದೇಹದ ಭಾಗಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬಿಜೆ ವೈದ್ಯಕೀಯ ಕಾಲೇಜಿನ ಜೂನಿಯರ್ ವೈದ್ಯರ ಸಂಘದ ಅಧ್ಯಕ್ಷ ಡಾ. ಧವಲ್ ಗಮೇಟಿ, 'ವಿಮಾನ ಅಪಘಾತ ಸ್ಥಳದಿಂದ ಇಲ್ಲಿಯವರೆಗೆ ಸುಮಾರು 270 ಶವಗಳನ್ನು ನಾಗರಿಕ ಆಸ್ಪತ್ರೆಗೆ ತರಲಾಗಿದೆ. ಡಿಎನ್‌ಎ ಮಾದರಿಗಳನ್ನು ಹೊಂದಿಸುವ ಮೂಲಕ ಸಂತ್ರಸ್ಥರನ್ನು ಗುರುತಿಸುವ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಶವಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಅಂತೆಯೇ ಅಹಮದಾಬಾದ್ ಅಗ್ನಿಶಾಮಕ ಮತ್ತು ತುರ್ತು ಸೇವೆ (ಎಎಫ್‌ಇಎಸ್) ಕಳೆದ 24 ಗಂಟೆಗಳಲ್ಲಿ ಮೇಘನಿನಗರ ಪ್ರದೇಶದ ವಿಮಾನ ಅಪಘಾತ ಸ್ಥಳದಿಂದ ಕೆಲವು ಮಾನವ ದೇಹದ ಭಾಗಗಳನ್ನು ಮತ್ತು ಒಂದು ಶವವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಹೆಚ್ಚುವರಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯೇಶ್ ಖಾಡಿಯಾ ಮಾತನಾಡಿ, "ಅಪಘಾತ ಸ್ಥಳದಲ್ಲಿ ತನಿಖೆಯಲ್ಲಿ ವಿಧಿವಿಜ್ಞಾನ ಮತ್ತು ವಾಯುಯಾನ ತಜ್ಞರಿಗೆ ಸಹಾಯ ಮಾಡುತ್ತಿರುವ ನಮ್ಮ ಅಗ್ನಿಶಾಮಕ ದಳದವರು ಶುಕ್ರವಾರ ಕ್ಯಾಂಟೀನ್‌ನ ಅವಶೇಷಗಳಿಂದ ಕೆಲವು ದೇಹದ ಭಾಗಗಳನ್ನು ಹೊರತೆಗೆಯಲಾಗಿದೆ. ಆದರೆ ಇಂದು ಬೆಳಿಗ್ಗೆ ಒಂದು ಶವ ಪತ್ತೆಯಾಗಿದೆ.
ವಿಮಾನದ ಬಾಲ ರೆಕ್ಕೆ ಕ್ಯಾಂಟೀನ್‌ನ ಹಾನಿಗೊಳಗಾದ ಕಟ್ಟಡದ ಮೇಲೆ ಸಿಲುಕಿಕೊಂಡಿದ್ದರಿಂದ, ಅದನ್ನು ಉರುಳಿಸಲು ಕ್ರೇನ್‌ಗಳನ್ನು ಬಳಸಲಾಗುತ್ತಿದೆ. ಏರ್ ಇಂಡಿಯಾ ಅಧಿಕಾರಿಗಳು ಸ್ಥಳಕ್ಕೆ ಬಂದ ನಂತರ ನಾವು ಕಟ್ಟಡದಿಂದ ಬಾಲ ರೆಕ್ಕೆಯನ್ನು ತೆಗೆದು ಕೆಳಗೆ ತರುತ್ತೇವೆ" ಎಂದು ಖಾಡಿಯಾ ಹೇಳಿದರು.
ಗುರುವಾರ ಮಧ್ಯಾಹ್ನ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ (AI 171) ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದಲ್ಲಿರುವ ಬಿಜೆ ವೈದ್ಯಕೀಯ ಹಾಸ್ಟೆಲ್ ಮತ್ತು ಅದರ ಕ್ಯಾಂಟೀನ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು.