ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಅವರೊಂದಿಗೆ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 
ದೇಶ

Air India plane crash: ಬೋಯಿಂಗ್ 787 ವಿಮಾನಗಳ ಮೇಲೆ ಕಣ್ಗಾವಲು; ತನಿಖೆಗೆ ಉನ್ನತ ಮಟ್ಟದ ಸಮಿತಿ ರಚನೆ

ಬ್ಲ್ಯಾಕ್ ಬಾಕ್ಸ್ ಲಭ್ಯವಾಗಿದ್ದು, ಅದರ ಡಿಕೋಡಿಂಗ್ ಮಾಡಿದ ನಂತರವೇ ವಿಮಾನ ಅಪಘಾತ ತನಿಖಾ ಬ್ಯೂರೋಗೆ (AAIB) ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

ನವದೆಹಲಿ: ಬೋಯಿಂಗ್ 787 ಸರಣಿಯ ವಿಮಾನಗಳ ಮೇಲೆ ವಿಸ್ತೃತ ಕಣ್ಗಾವಲು ಇರಿಸಲು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶಿಸಿದೆ.

ಗುರುವಾರ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಏರ್ ಇಂಡಿಯಾ ವಿಮಾನ ಪತನಗೊಂಡಿದ್ದು, ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿಯನ್ನು ಹೊರತುಪಡಿಸಿ, ವಿಮಾನದಲ್ಲಿದ್ದ ಎಲ್ಲ 242 ಜನರು ಸೇರಿದಂತೆ 270 ಜನರು ಸಾವಿಗೀಡಾಗಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು, ಮಾರಕ ಅಪಘಾತದ ನಂತರ ಟೀಕೆಗೆ ಗುರಿಯಾಗಿರುವ ಬೋಯಿಂಗ್ ವಿಮಾನ ಸರಣಿಗಳ ಮೇಲೆ ಕಣ್ಗಾವಲು ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಿದರು.

'ವಾಯುಯಾನಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ನಾವು ತುಂಬಾ ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತೇವೆ. ಆದಾಗ್ಯೂ, ಬೋಯಿಂಗ್ 787 ವಿಮಾನವನ್ನು ಒಳಗೊಂಡ ಇತ್ತೀಚಿನ ಘಟನೆಯ ನಂತರ, ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಭವಿಷ್ಯದ ಸಮಸ್ಯೆಗಳನ್ನು ತಡೆಗಟ್ಟಲು ಬೋಯಿಂಗ್ 787 ಸರಣಿಯ ವಿಮಾನಗಳ ಸಂಪೂರ್ಣ ತಪಾಸಣೆ ಅಥವಾ ಮೇಲ್ವಿಚಾರಣೆ (ವಿಸ್ತೃತ ಕಣ್ಗಾವಲು) ನಡೆಸುವುದು ಅಗತ್ಯವೆಂದು ತಿಳಿದುಬಂದಿದೆ' ಎಂದರು.

'787 ಬೋಯಿಂಗ್ ವಿಮಾನಗಳಿಗೆ ವಿಸ್ತೃತ ಕಣ್ಗಾವಲು ಇರಿಸಲು ಡಿಜಿಸಿಎ ಆದೇಶ ನೀಡಿದೆ. ಸದ್ಯ ನಮ್ಮ ಭಾರತೀಯ ವಿಮಾನ ಪಡೆಯಲ್ಲಿ 34 ಬೋಯಿಂಗ್ ವಿಮಾನಗಳಿವೆ. 8 ವಿಮಾನಗಳನ್ನು ಈಗಾಗಲೇ ಪರಿಶೀಲಿಸಲಾಗಿದೆ ಮತ್ತು ತುರ್ತಾಗಿ, ತಕ್ಷಣವೇ ಉಳಿದ ಎಲ್ಲವನ್ನೂ ಪರಿಶೀಲನೆಗೆ ಒಳಪಡಿಸಲಾಗುವುದು' ಎಂದು ಸಚಿವರು ಹೇಳಿದರು.

ಲಂಡನ್ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI171, ಬೋಯಿಂಗ್ 787-8 ಡ್ರೀಮ್‌ಲೈನರ್ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡು ಮೇಘಾನಿನಗರದ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಆಸ್ಪತ್ರೆ ಸಂಕೀರ್ಣದಲ್ಲಿ ಕನಿಷ್ಠ 29 ಜನರು ಸಾವಿಗೀಡಾಗಿದ್ದಾರೆ ಮತ್ತು ವಿಮಾನದಲ್ಲಿದ್ದ 241 ಜನರು ಮೃತಪಟ್ಟಿದ್ದಾರೆ.

ಪೈಲಟ್‌ನಿಂದ ಕೊನೆಯ ಸಂದೇಶ

ಪೈಲಟ್‌ನಿಂದ ಬಂದ ಕೊನೆಯ ಸಂದೇಶ 'ಮೇ ಡೇ' ಕರೆ. ನಂತರ ವಾಯು ಸಂಚಾರ ನಿಯಂತ್ರಣ (ಎಟಿಸಿ) ವಿಮಾನದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿತು ಎಂದು ವಿಮಾನಯಾನ ಸಚಿವಾಲಯ ತಿಳಿಸಿದೆ.

'ವಿಮಾನ ಮಧ್ಯಾಹ್ನ 1.39ಕ್ಕೆ ಹೊರಟಿತು ಮತ್ತು ಕೆಲವೇ ಸೆಕೆಂಡುಗಳಲ್ಲಿ, ಸುಮಾರು 650 ಅಡಿ ಎತ್ತರವನ್ನು ತಲುಪಿದ ನಂತರ, ಕೆಳಗಿಳಿಯಲು ಪ್ರಾರಂಭಿಸಿತು. ಮಧ್ಯಾಹ್ನ 1.39ಕ್ಕೆ ಪೈಲಟ್ ಅಹಮದಾಬಾದ್ ಎಟಿಸಿಗೆ ಇದು ಮೇ ದಿನ, ಅಂದರೆ ಪೂರ್ಣ ತುರ್ತುಸ್ಥಿತಿ ಎಂದು ಮಾಹಿತಿ ನೀಡಿದ್ದಾರೆ. ಎಟಿಸಿ ಪ್ರಕಾರ, ವಿಮಾನವನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಿಖರವಾಗಿ 1 ನಿಮಿಷದ ನಂತರ, ಈ ವಿಮಾನವು ವಿಮಾನ ನಿಲ್ದಾಣದಿಂದ ಸುಮಾರು 2 ಕಿ.ಮೀ ದೂರದಲ್ಲಿರುವ ಮೇಘಾನಿನಗರದಲ್ಲಿ ಪತನಗೊಂಡಿತು' ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ ಹೇಳಿದರು.

ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಈ ಮಾರಕ ಅಪಘಾತಕ್ಕೂ ಮುನ್ನ ಪ್ಯಾರಿಸ್-ದೆಹಲಿ-ಅಹಮದಾಬಾದ್ ವಲಯವನ್ನು ಯಾವುದೇ ಅಪಘಾತವಿಲ್ಲದೆ ಪೂರ್ಣಗೊಳಿಸಿತ್ತು ಎಂದು ಅವರು ಹೇಳಿದರು.

ಬ್ಲ್ಯಾಕ್ ಬಾಕ್ಸ್ ಲಭ್ಯವಾಗಿದ್ದು, ಅದರ ಡಿಕೋಡಿಂಗ್ ಮಾಡಿದ ನಂತರವೇ ವಿಮಾನ ಅಪಘಾತ ತನಿಖಾ ಬ್ಯೂರೋಗೆ (AAIB) ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು.

'AAIB ಮೂಲಕ ನಡೆಯುತ್ತಿರುವ ತಾಂತ್ರಿಕ ತನಿಖೆಯಲ್ಲಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಸ್ಥಳದಿಂದ ಬ್ಲ್ಯಾಕ್ ಬಾಕ್ಸ್ ಅನ್ನು ಪಡೆಯಲಾಗಿದೆ. ಬ್ಲ್ಯಾಕ್ ಬಾಕ್ಸ್ ಡಿಕೋಡಿಂಗ್ ಮಾಡುವುದರಿಂದ ಅಪಘಾತ ಅಥವಾ ಅಪಘಾತಕ್ಕೆ ಮುನ್ನ ನಿಜವಾಗಿ ಏನಾಗಿತ್ತು ಎಂಬುದರ ಕುರಿತು AAIB ತಂಡಕ್ಕೆ ಆಳವಾದ ಒಳನೋಟವನ್ನು ನೀಡುತ್ತದೆ. AAIB ತನ್ನ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಫಲಿತಾಂಶಗಳು ಅಥವಾ ವರದಿ ಏನಾಗಲಿದೆ ಎಂದು ನಾವು ಕುತೂಹಲದಿಂದ ಕಾಯುತ್ತಿದ್ದೇವೆ' ಎಂದು ಅವರು ಹೇಳಿದರು.

ಉನ್ನತ ಮಟ್ಟದ ಸಮಿತಿ ರಚನೆ

ಘಟನೆಯ ತನಿಖೆಗಾಗಿ ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು (multi-disciplinary committee) ರಚಿಸಲಾಗಿದೆ. ಆಳವಾದ ತನಿಖೆ ನಡೆಸಲು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

'ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲು ಮತ್ತು ಈ ಘಟನೆಯ ಸುತ್ತಲಿನ ಎಲ್ಲ ವಿಚಾರಗಳು ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಲು, ಮತ್ತೊಂದು ಸಮಿತಿ ರಚಿಸುವುದು ಉತ್ತಮ ಎಂದು ನಾವು ಭಾವಿಸಿದ್ದೇವೆ. ನಾವು ತಕ್ಷಣವೇ ಮತ್ತೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದೇವೆ' ಎಂದು ಸಚಿವರು ಹೇಳಿದರು.

'ಗೃಹ ಕಾರ್ಯದರ್ಶಿ ಸಮಿತಿಯ ಅಧ್ಯಕ್ಷರಾಗಿದ್ದು, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಘಟನೆ ನಡೆದ ಗುಜರಾತ್ ರಾಜ್ಯದ ಒಬ್ಬ ಪ್ರತಿನಿಧಿ, ಗುಜರಾತ್‌ನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರತಿನಿಧಿ, ಅಹಮದಾಬಾದ್ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆಯ ತಪಾಸಣೆ ಮತ್ತು ಸುರಕ್ಷತೆಯ ಡಿಜಿ, ಬಿಸಿಎಎಸ್ ಡಿಜಿ, ಡಿಜಿಸಿಎ ಡಿಜಿ, ಐಬಿಯ ವಿಶೇಷ ನಿರ್ದೇಶಕರು ಮತ್ತು ವಿಧಿವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಸಮಿತಿಯಲ್ಲಿದ್ದಾರೆ' ಎಂದು ಅವರು ವಿವರಿಸಿದರು.

ವಿವಿಧ ಹಿನ್ನೆಲೆಯ ಜನರು ಘಟನೆಯ ಬಗ್ಗೆ ಸಮಗ್ರ ರೀತಿಯಲ್ಲಿ ತನಿಖೆ ನಡೆಸಲಿರುವ ಸಮಿತಿಯಲ್ಲಿ ಇದ್ದಾರೆ. ತನಿಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ನಾವು ಅವರಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Karur stampede: ದುರಂತದ ಬಳಿಕ ಕರೂರಿಗೆ ಭೇಟಿ ನೀಡಲಿಲ್ಲ ಏಕೆಂದರೆ...: ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

'ಹೆಲಿಕಾಪ್ಟರ್ ಸಿದ್ದರಾಮಯ್ಯ': ರಸ್ತೆಯಲ್ಲಿ ಹೋದ್ರೆ ಜನರ ಘೇರಾವ್ ಭಯದಿಂದ ವೈಮಾನಿಕ ಸಮೀಕ್ಷೆ ನಡೆಸಿದ್ರಾ? ಬಿಜೆಪಿ

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ನಿರಾಕರಣೆ: ಅ. 9ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

ಉಚಿತ ಔಷಧ ಯೋಜನೆ: ಕೆಮ್ಮಿನ ಸಿರಪ್ ಸೇವಿಸಿದ್ದ 5 ವರ್ಷದ ಬಾಲಕ ಸಾವು, ಮತ್ತೊಂದು ಮಗು ಸ್ಥಿತಿ ಗಂಭೀರ!

SCROLL FOR NEXT