ಅಹಮದಾಬಾದ್: ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನದಲ್ಲಿ 270 ಜನ ಸಾವನ್ನಪ್ಪಿದ ಐದು ದಿನಗಳ ನಂತರ, ಡಿಎನ್‌ಎ ಹೊಂದಾಣಿಕೆಯ ಮೂಲಕ ಇದುವರೆಗೆ 135 ಜನರನ್ನು ಗುರುತಿಸಲಾಗಿದೆ ಮತ್ತು 101 ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
"ಇಂದು ಬೆಳಗ್ಗೆವರೆಗೆ 135 ಡಿಎನ್‌ಎ ಮಾದರಿಗಳನ್ನು ಹೊಂದಿಸಲಾಗಿದೆ ಮತ್ತು 101 ಶವಗಳನ್ನು ಈಗಾಗಲೇ ಆಯಾ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಈ 101 ಮೃತರಲ್ಲಿ ಐದು ಮಂದಿ ವಿಮಾನದಲ್ಲಿ ಇರಲಿಲ್ಲ" ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಕೇಶ್ ಜೋಶಿ ವರದಿಗಾರರಿಗೆ ತಿಳಿಸಿದ್ದಾರೆ.
ಶೀಘ್ರದಲ್ಲೇ ಉಳಿದ ಶವಗಳನ್ನು ಅವರ ಪ್ರೀತಿಪಾತ್ರರಿಗೆ ಹಸ್ತಾಂತರಿಸಲಾಗುವುದು. ಇನ್ನು ಐದು ಕುಟುಂಬಗಳು ಪ್ರಸ್ತುತ ಆಸ್ಪತ್ರೆ ಆಡಳಿತದೊಂದಿಗೆ ಸಂಪರ್ಕದಲ್ಲಿವೆ. ಹೆಚ್ಚುವರಿಯಾಗಿ 17 ಕುಟುಂಬಗಳು ಡಿಎನ್‌ಎ ವಿಶ್ಲೇಷಣೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಎಂದು ಡಾ. ಜೋಶಿ ಅವರು ಹೇಳಿದ್ದಾರೆ.
ಡಾ. ಜೋಶಿ ಅವರು ಮೃತರ ಮತ್ತು ಗುರುತಿಸಲ್ಪಟ್ಟವರ ಜಿಲ್ಲಾವಾರು ಡೇಟಾವನ್ನು ಸಹ ಹಂಚಿಕೊಂಡಿದ್ದು, ಅಹಮದಾಬಾದ್ ನ 30 ಜನ ಮೃತಪಟ್ಟಿದ್ದು, 13 ಜನ ವಡೋದರಾ ಮೂಲದವರಾಗಿದ್ದಾರೆ. 10 ಮಂದಿ ಖೇಡಾ, ಒಂಬತ್ತು ಮಂದಿ ಆನಂದ್, ಮೆಹ್ಸಾನಾ ಮತ್ತು ಗಾಂಧಿನಗರದ ತಲಾ ಐದು ಮಂದಿ, ನಾಲ್ಕು ಮಂದಿ ಭರೂಚ್‌ನವರು, ಮೂವರು ಸೂರತ್‌ನವರು, ಇಬ್ಬರು ಅರವಳ್ಳಿಯವರು ಮತ್ತು ಬೊಟಾಡ್, ಜುನಾಗಢ್, ಅಮ್ರೇಲಿ, ಮಹಿಸಾಗರ್, ಭಾವನಗರ, ಗಿರ್ ಸೋಮನಾಥ್, ನಾಡಿಯಾಡ್ ಮತ್ತು ರಾಜ್‌ಕೋಟ್ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಲ್ಕು ಮಂದಿ ಮೃತಪಟ್ಟಿದ್ದು, ಇಬ್ಬರು ಉದಯಪುರದವರು ಮತ್ತು ಜೋಧ್‌ಪುರ ಹಾಗೂ ಪಾಟ್ನಾದ ತಲಾ ಒಬ್ಬರು ವಿಮಾನ ಪತನದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಜೂನ್ 12 ರಂದು ಮಧ್ಯಾಹ್ನ 1.39ಕ್ಕೆ 242 ಜನರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು.