ನವದೆಹಲಿ: ಹಿರಿಯ ನಟ ಕಮಲ್ ಹಾಸನ್ ನಟಿಸಿರುವ ಥಗ್ ಲೈಫ್ ಚಿತ್ರದ ಪ್ರದರ್ಶನಕ್ಕೆ "ನ್ಯಾಯಾಂಗೇತರ ನಿಷೇಧ" ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಬುಧವಾರದೊಳಗೆ ಸರ್ಕಾರ ತನ್ನ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ನಿರ್ದೇಶಿಸಿತು.
ಗುಂಪು, ಗೂಂಡಾಗಿರಿ ಬೀದಿಗೆ ಬಂದು ಆಕ್ರಮಣ ಮಾಡಲು ಸಾಧ್ಯವಿಲ್ಲ,. ಕಾನೂನಿನ ನಿಯಮ ಮೇಲುಗೈ ಸಾಧಿಸಬೇಕು. ಯಾರಾದರೂ ಒಂದು ವಿಷಯ ಬಗ್ಗೆ ಹೇಳಿಕೆ ನೀಡಿದ್ದರೆ, ಅದನ್ನು ಹೇಳಿಕೆಯ ಮೂಲಕ ಎದುರಿಸಿ. ಯಾರಾದರೂ ಸ್ವಲ್ಪ ಬರೆದಿದ್ದಾರೆ ಎಂದರೆ ಅದನ್ನು ಬರೆಯುವ ಮೂಲಕ ಎದುರಿಸಿ ಎಂದು ನ್ಯಾಯಾಲಯ ಹೇಳಿದೆ.
ಕನ್ನಡ ಪರ ಗುಂಪುಗಳು ನಟ ಕಮಲ್ ಹಾಸನ್ ಭಾಷೆಯ ಕುರಿತು ನೀಡಿದ ಹೇಳಿಕೆಯ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಮಣಿರತ್ನಂ ನಿರ್ದೇಶನದ ಚಿತ್ರ ಥಗ್ ಲೈಫ್ ನ್ನು ಕರ್ನಾಟಕದಲ್ಲಿ ನಿಷೇಧಿಸಲಾಯಿತು. ಚೆನ್ನೈನಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ, ನಟ-ರಾಜಕಾರಣಿ ಕಮಲ್ ಹಾಸನ್ ಕನ್ನಡ "ತಮಿಳು ಭಾಷೆಯಿಂದ ಹುಟ್ಟಿದೆ" ಎಂದು ಹೇಳಿಕೆ ನೀಡಿದ್ದರು.
ಕನ್ನಡಪರ ಸಂಘಟನೆಗಳು, ಕನ್ನಡಿಗರು ಪದೇ ಪದೇ ಬೆದರಿಕೆ ಹಾಕುತ್ತಿದ್ದರೂ, ಕಮಲ್ ಹಾಸನ್ ಕ್ಷಮೆಯಾಚಿಸಲು ನಿರಾಕರಿಸಿದರು. ಇದು ಕನ್ನಡ ಪರ ಗುಂಪುಗಳನ್ನು ಮತ್ತಷ್ಟು ಕೆರಳಿಸಿ ಕಮಲ್ ಹಾಸನ್ ಕ್ಷಮೆಯಾಚಿಸುವವರೆಗೆ ರಾಜ್ಯದಲ್ಲಿ ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಘೋಷಿಸಿತು.
ಜೂನ್ 5 ರಂದು ಕರ್ನಾಟಕ ಹೊರತುಪಡಿಸಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಬಿಡುಗಡೆಯಾಯಿತು.
ಸುಪ್ರೀಂ ಕೋರ್ಟ್ ಹೇಳುವುದೇನು?
ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಿತ್ರದ ಪ್ರದರ್ಶನ ಮಾಡುವ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ ಎಂದು ಒತ್ತಿ ಹೇಳಿದ ನ್ಯಾಯಾಲಯ, "ಸಿಬಿಎಫ್‌ಸಿ ಪ್ರಮಾಣಪತ್ರ ಹೊಂದಿರುವ ಯಾವುದೇ ಚಿತ್ರವನ್ನು ಬಿಡುಗಡೆ ಮಾಡಬೇಕು. ರಾಜ್ಯವು ಅದರ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕಾನೂನಿನ ನಿಯಮವು ಹೇಳುತ್ತದೆ. ಚಿತ್ರಮಂದಿರಗಳನ್ನು ಸುಡುವ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದಿತು.
"ಜನರು ಚಿತ್ರವನ್ನು ನೋಡದಿರಬಹುದು. ಅದು ಬೇರೆ ವಿಷಯ. ಜನರು ಚಿತ್ರವನ್ನು ನೋಡಲೇಬೇಕು ಎಂದು ನಾವು ಯಾವುದೇ ಆದೇಶವನ್ನು ನೀಡುತ್ತಿಲ್ಲ. ಆದರೆ ಚಿತ್ರವನ್ನು ಬಿಡುಗಡೆ ಮಾಡಬೇಕು" ಎಂದು ನ್ಯಾಯಾಲಯ ಹೇಳಿದೆ.
ಹೈಕೋರ್ಟ್ ನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಕಮಲ್ ಹಾಸನ್ ಕ್ಷಮೆಯಾಚಿಸುವಂತೆ ನಿರ್ದೇಶಿಸಿದ ಕರ್ನಾಟಕ ಹೈಕೋರ್ಟ್ ಆದೇಶಕ್ಕೂ ನ್ಯಾಯಾಲಯ ಅಸಮ್ಮತಿ ವ್ಯಕ್ತಪಡಿಸಿದೆ. "ಇದು ಹೈಕೋರ್ಟ್‌ನ ಕೆಲಸವಲ್ಲ" ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು. ಕರ್ನಾಟಕದ ಜನರು ಕಮಲ್ ಹಾಸನ್ ಹೇಳಿಕೆಯನ್ನು ವಿರೋಧಿಸಬಹುದು, ಆದರೆ ಕೊಲೆ ಬೆದರಿಕೆಗಳನ್ನು ಹಾಕಬಾರದಿತ್ತು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಪೀಠವು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಿ ಚಲನಚಿತ್ರಕ್ಕೆ ಸಂಬಂಧಿಸಿದ ಪ್ರಕರಣವು ಹೈಕೋರ್ಟ್‌ನಲ್ಲಿ ಬಾಕಿ ಇದೆ, ಗುರುವಾರ ಹೆಚ್ಚಿನ ವಿಚಾರಣೆ ನಡೆಸೋಣ ಎಂದಿದೆ.
ಕರ್ನಾಟಕದಲ್ಲಿ ಥಗ್ ಲೈಫ್ ಚಿತ್ರದ ನಿಷೇಧವನ್ನು ಪ್ರಶ್ನಿಸಿ ಎಂ ಮಹೇಶ್ ರೆಡ್ಡಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.