ಚಿತ್ತೂರು: ಸಾಲ ಮರುಪಾವತಿ ಮಾಡಲಿಲ್ಲವೆಂದು ಮಹಿಳೆಯನ್ನು ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಘಟನೆಯೊಂದು ಚಿತ್ತೂರಿನ ಕುಪ್ಪಂ ಮಂಡಲದ ನಾರಾಯಣಪುರಂ ಗ್ರಾಮದಲ್ಲಿ ನಡೆದಿದ್ದು, ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಮುನಿಕಣ್ಣಪ್ಪ ಎಂಬ ವ್ಯಕ್ತಿ ಸಿರಿಷಾ ಎಂಬ ಮಹಿಳೆಯನ್ನು ಮರಕ್ಕೆ ಕಟ್ಟಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಿರಿಷಾ ಅವರ ಪತಿ ತಿಮ್ಮರಾಯಪ್ಪ ಮೂರು ವರ್ಷಗಳ ಹಿಂದೆ ಮುನಿಕಣ್ಣಪ್ಪ ಅವರಿಂದ 80,000 ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ತಿಮ್ಮರಾಯಪ್ಪ ಊರು ಬಿಟ್ಟಿದ್ದ.
ಇನ್ನು ಮಹಿಳೆ ದಿನಗೂಲಿ ಕಾರ್ಮಿಕಳಾಗಿ ಕೆಲಸ ಮಾಡಿ, ಮಕ್ಕಳನ್ನು ಪೋಷಿಸುತ್ತಿದ್ದು, ಸಾಲ ಮರುಪಾವತಿ ಮಾಡಲು ವಿಳಂಬ ಮಾಡಿದ್ದಾರೆ.
ಈ ನಡುವೆ ಸೋಮವಾರ ಮಧ್ಯಾಹ್ನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಮುನಿಕಣ್ಣಪ್ಪ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಬಲವಂತವಾಗಿ ಎಳೆದುಕೊಂಡು ಹೋಗಿ ಬೇವಿನ ಮರಕ್ಕೆ ಕಟ್ಟಿ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.
ಅಲ್ಲದೆ, ಘಟನೆಯನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಲು ಪ್ರಯತ್ನಿಸಿದ ಗ್ರಾಮಸ್ಥರ ಮೇಲೂ ಆತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ನಿವಾಸಿಗಳು ತಕ್ಷಣ ಕುಪ್ಪಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಬಿಎನ್‌ಎಸ್‌ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಏತನ್ಮಧ್ಯೆ, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇಂತಹ ಅನಾಗರಿಕ ಕೃತ್ಯಗಳು ಎಂದಿಗೂ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದು ಅನ್ಯಾಯ. ಆರೋಪಿಗಳು ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆಯರ ಮೇಲಿನ ಇಂತಹ ಕ್ರೌರ್ಯವನ್ನು ನಾವು ಸಹಿಸುವುದಿಲ್ಲ ಎಂದು ಚಂದ್ರಬಾಬು ನಾಯ್ಡು ಅವರು ಎಚ್ಚರಿಸಿದ್ದಾರೆ.