ಜಲ್ನಾ: 93 ವರ್ಷದ ವೃದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಮಂಗಳಸೂತ್ರ (ತಾಳಿ) ಕೊಡಿಸಲು ಚಿನ್ನದ ಅಂಗಡಿಗೆ ಹೋಗಿದ್ದು ಈ ವೇಳೆ ಅಂಗಡಿ ಮಾಲೀಕನ ಹೃದಯ ಶ್ರೀಮಂತಿಕೆ ನೋಡಿ ಕಣ್ಣೀರು ಹಾಕಿದ್ದಾರೆ.
ಹೌದು.. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಈ ಘಟನೆ ವರದಿಯಾಗಿದ್ದು, '93 ವರ್ಷದ ವೃದ್ಧನೊಬ್ಬ ಸಾಂಪ್ರದಾಯಿಕ ಬಿಳಿ 'ಧೋತಿ-ಕುರ್ತಾ' ಮತ್ತು ಟೋಪಿ ಧರಿಸಿ ಆಭರಣ ಅಂಗಡಿಯೊಂದಕ್ಕೆ ಕಾಲಿಟ್ಟಿದ್ದರು.
ಆಂಗಡಿಯ ಸಿಬ್ಬಂದಿ ಅವರ ವಿನಮ್ರತೆಯ ನೋಟವನ್ನು ನೋಡಿ ಅವರು ಭಿಕ್ಷೆ ಬೇಡಲು ಬಂದಿದ್ದಾರೆ ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಆ ವೃದ್ದ ತನ್ನ ಪ್ರೀತಿಯ ಪತ್ನಿಗೆ ಚಿನ್ನದ ಮಂಗಳಸೂತ್ರ ಖರೀದಿಸಲು ಬಂದಿರುವುದಾಗಿ ಹೇಳಿದಾಗ ಹೌಹಾರಿದ್ದಾರೆ.
@VarlinPanwar ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, 'ಇದು ನನ್ನ ದಿನವನ್ನು ಇನ್ನಷ್ಟು ಸುಂದರವಾಗಿಸಿತು. ಮಹಾರಾಷ್ಟ್ರದ ತೀರ್ಥಯಾತ್ರೆಯ ಸ್ಥಳವಾದ ಪಂಢರಪುರಕ್ಕೆ ಹೋಗುವ ದಾರಿಯಲ್ಲಿ ವೃದ್ಧ ದಂಪತಿಗಳು ಅಲ್ಪ ಸ್ವಲ್ಪ ಕೂಡಿಟ್ಟ ಹಣದಿಂದ ಆಭರಣ ಖರೀದಿಸಲು ಚಿನ್ನದಂಗಡಿಗೆ ಅಂಗಡಿಗೆ ಹೋಗಿದ್ದಾರೆ.
ಅಂಗಡಿ ಮಾಲೀಕರು ಅವರಿಗೆ ಸಹಾಯ ಮಾಡಿದ ರೀತಿ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ನೀವು ಮಾಡುವ ಒಳ್ಳೆಯ ಕೆಲಸವು ಯಾವಾಗಲೂ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಹಾಗೂ ನಿಮಗೆ ಯಶಸ್ಸನ್ನು ತರುತ್ತದೆ ಎಂದು ಬರೆದುಕೊಂಡಿದ್ದಾರೆ.
ಇಷ್ಟಕ್ಕೂ ಏನಿದು ಘಟನೆ?
ವೈರಲ್ ಆಗಿರುವ ವಿಡಿಯೋದಲ್ಲಿ ಅಂಗಡಿಗೆ ಬಂದ 93 ವರ್ಷದ ನಿವೃತ್ತಿ ಶಿಂಧೆ ಎಂಬ ವೃದ್ಧ ತಮ್ಮ ಪತ್ನಿ ಶಾಂತಾಬಾಯಿಗೆ ಆಭರಣ ಖರೀದಿಸಲು ಆಭರಣದ ಅಂಗಡಿಗೆ ಬಂದಿದ್ದಾರೆ. ಅಂಗಡಿಗೆ ಬಂದ ಈ ವೃದ್ಧ ದಂಪತಿಗಳು ಚಿನ್ನದ ಸರ ಮತ್ತು ತಾಳಿ ಖರೀದಿಸಲು ಮುಂದಾಗುತ್ತಾರೆ.
ಇವರಿಬ್ಬರ ಪ್ರೀತಿ ಬಾಂಧವ್ಯವನ್ನು ನೋಡಿದ ಚಿನ್ನದ ಅಂಗಡಿ ಮಾಲೀಕನು ಅವರೊಂದಿಗೆ ಸಂಭಾಷಣೆಗೆ ಇಳಿದಿದ್ದಾನೆ. ಈ ವೇಳೆಯಲ್ಲಿ ನಿಮ್ಮ ಬಳಿ ಹಣ ಎಷ್ಟಿದೆ ಎಂದು ಕೇಳಿದ್ದು, ವೃದ್ಧ ಮಹಿಳೆ ತನ್ನ ಕೈ ಚೀಲಕ್ಕೆ ಕೈಹಾಕಿ ತನ್ನಲ್ಲಿದ್ದ ಚಿಲ್ಲರೆ ಹಣವನ್ನು ಎಣಿಸಿ ಸುಮಾರು 1,120 ರೂ. ಹಣವನ್ನು ತೋರಿಸಿದ್ದಾರೆ.
ಅವರ ಆರ್ಥಿಕ ಸ್ಥಿತಿ ಹಾಗೂ ಕಷ್ಟವನ್ನು ಅರಿತ ಅಂಗಡಿ ಮಾಲೀಕನು “ಇಷ್ಟು ಹಣ?” ಎಂದಿದ್ದಾನೆ. ಆ ವ್ಯಕ್ತಿಯ ಮಾತಿನ ದಾಟಿಯನ್ನು ಅರಿತ ವೃದ್ಧ ಚೀಲಕ್ಕೆ ಕೈ ಹಾಕಿ ನಾಣ್ಯ ತುಂಬಿದ ಗಂಟನು ತೆಗೆದುಕೊಡುತ್ತಾನೆ.
ಈ ವೇಳೆಯಲ್ಲಿ ಅಂಗಡಿ ಮಾಲೀಕನು ವೃದ್ಧ ಮಹಿಳೆಯೂ ನೀಡಿದ ಹಣವನ್ನು ಆಕೆಗೆ ಹಿಂದಿರುಗಿಸಿ, ಇದು ಪ್ರೀತಿಯ ಉಡುಗೊರೆ ಎಂದು ಹೇಳಿ ಈ ಆಭರಣಕ್ಕೆ ತಲಾ 20 ರೂ ಹಾಗೂ 10 ರೂ ಮಾತ್ರ ವಿಧಿಸಿರುವುದಾಗಿ ಹೇಳುತ್ತಾನೆ. ಅಂಗಡಿ ಮಾಲೀಕನ ಮಾತು ಕೇಳಿ ಈ ವೃದ್ಧ ದಂಪತಿಗಳು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಅಂದಹಾಗೆ ನಿವೃತ್ತಿ ಶಿಂದೆ ಮತ್ತು ಅವರ ಪತ್ನಿ ಶಾಂತಾಬಾಯಿ ಅವರು ಜಲನ್ ಜಿಲ್ಲೆಯ ಅಂಭೋರಾ ಜಹಗಿರ್ ಗ್ರಾಮದವರು. ಕೃಷಿ ಕುಟುಂಬಕ್ಕೆ ಸೇರಿದವರಾದ ಇವರು ಈ ಘಟನೆ ನಡೆಯುವ ಸಂದರ್ಭದಲ್ಲಿ ಪಂಢರಪುರಕ್ಕೆ ಆಷಾಢ ಏಕಾದಶಿಗಾಗಿ ಪಾದಯಾತ್ರೆ ಹೊರಟವರು. ಮಾರ್ಗ ಮಧ್ಯೆ ಛತ್ರಪತಿ ಸಾಂಭಾಜಿನಗರದಲ್ಲಿರುವ ಆಭರಣ ಮಳಿಗೆಗೆ ಇವರು ಭೇಟಿ ನೀಡಿದ್ದರು.