ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮಾರೆಡುಮಿಲ್ಲಿ ಅರಣ್ಯ ಪ್ರದೇಶದ ಅಕೂರು ಗ್ರಾಮದ ಬಳಿ ಬುಧವಾರ ಬೆಳಗ್ಗೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಕೇಂದ್ರ ಸಮಿತಿಯ ಹಿರಿಯ ಸದಸ್ಯ ಸೇರಿದಂತೆ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ರಂಪಚೋಡವರಂ ಬಳಿಯ ಅರಣ್ಯ ಪ್ರದೇಶದಲ್ಲಿ ನಡೆದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಈ ಎನ್ಕೌಂಟರ್ ನಡೆದಿದೆ.
ಮೃತ ಮಾವೋವಾದಿಗಳನ್ನು ಸಿಪಿಐ(ಮಾವೋವಾದಿ) ಕೇಂದ್ರ ಸಮಿತಿ ಸದಸ್ಯ ಮತ್ತು ಆಂಧ್ರ ಒಡಿಶಾ ಗಡಿ ವಿಶೇಷ ವಲಯ ಸಮಿತಿ(ಎಒಬಿಎಸ್‌ಜೆಡ್‌ಸಿ) ಕಾರ್ಯದರ್ಶಿ ಗಜರ್ಲಾ ರವಿ ಅಲಿಯಾಸ್ ಉದಯ್ ಮತ್ತು ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಕೊಲ್ಲಲ್ಪಟ್ಟ ಕೇಂದ್ರ ಸಮಿತಿ ಸದಸ್ಯ ಚಲಪತಿ ಅವರ ಪತ್ನಿ, ದಕ್ಷಿಣ ವಲಯ ಸಮಿತಿ ಸದಸ್ಯೆ ಅರುಣಾ ಹಾಗೂ ಮತ್ತು ಇನ್ನೊಬ್ಬ ಸದಸ್ಯ ಎಂದು ಗುರುತಿಸಲಾಗಿದೆ.
ಆರಂಭಿಕ ವರದಿಗಳ ಪ್ರಕಾರ, ಭದ್ರತಾ ಪಡೆಗಳು ಎನ್‌ಕೌಂಟರ್ ಸ್ಥಳದಿಂದ ಮೂರು ಎಕೆ -47 ರೈಫಲ್‌ಗಳನ್ನು ವಶಪಡಿಸಿಕೊಂಡಿವೆ. ಪೊಲೀಸ್ ಸಿಬ್ಬಂದಿಗೆ ಯಾವುದೇ ಗಾಯಗಳಾದ ಬಗ್ಗೆ ಅಥವಾ ಸಾವುನೋವುಗಳು ವರದಿಯಾಗಿಲ್ಲ.
ಸ್ಥಳದಿಂದ ಶವಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ.