ಜೈಪುರ: ತುರ್ತು ಪರಿಸ್ಥಿತಿಯನ್ನು "ಸಂವಿಧಾನ ಹತ್ಯೆ ದಿವಸ್" ಎಂದು ಆಚರಿಸುತ್ತಿರುವ ಭಾರತೀಯ ಜನತಾ ಪಕ್ಷದ(ಬಿಜೆಪಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಕೇಸರಿ ಪಕ್ಷ, ಸಂವಿಧಾನ ಬಾಹಿರವಾಗಿ ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳನ್ನು ಉರುಳಿಸಿದೆ ಎಂದು ಗುರುವಾರ ಆರೋಪಿಸಿದ್ದಾರೆ.
ಇಂದು ಜೋಧಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೆಹ್ಲೋಟ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು ಮತ್ತು ಶಾಸಕರಿಗೆ ಭಾರಿ ಮೊತ್ತದ ಹಣವನ್ನು ವಿತರಿಸುವ ಮೂಲಕ ಕುದುರೆ ವ್ಯಾಪಾರದಲ್ಲಿ ತೊಡಗಿದ್ದರು ಎಂದು ಆರೋಪಿಸಿದರು.
"ನರೇಂದ್ರ ಮೋದಿ ಸರ್ಕಾರದಲ್ಲಿ ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ಗಜೇಂದ್ರ ಸಿಂಗ್ ಶೇಖಾವತ್ ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿ, ವಿಫಲರಾದರು. ಅವರು ಉರುಳಿಸಲು ಸಾಧ್ಯವಾಗದ ದೇಶದ ಏಕೈಕ ಸರ್ಕಾರ ನಮ್ಮದು" ಎಂದು ಗೆಹ್ಲೋಟ್ ಹೇಳಿದ್ದಾರೆ.
"ಮಧ್ಯಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಸರ್ಕಾರಗಳನ್ನು ಉರುಳಿಸಿದರು. ಆದರೆ ರಾಜಸ್ಥಾನದಲ್ಲಿ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಈ ಜನ ನಮ್ಮ ಪಕ್ಷವನ್ನು ಒಡೆಯಲು ಪ್ರಯತ್ನಿಸಿದರು ಮತ್ತು ಶಾಸಕರಿಗೆ ಹಣ ಹಂಚಿದರು. ನನ್ನ ಬಳಿ ಇದಕ್ಕೆ ಪುರಾವೆಗಳಿವೆ. ಅವರು ಸೃಷ್ಟಿಸಿದ ಈ ಪರಿಸ್ಥಿತಿ ಸಂವಿಧಾನಕ್ಕೆ ಅನುಗುಣವಾಗಿದೆಯೇ? ಇಂದು, ಇದೇ ಜನ ಸಂವಿಧಾನ ಹತ್ಯೆ ದಿನವನ್ನು ಆಚರಿಸುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
"ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಶಾಸಕರನ್ನು ಖರೀದಿಸಲು ಎಷ್ಟು ಹಣ ವಿತರಿಸಲಾಗಿದೆ ಎಂದು ನೀವು ಊಹಿಸಲು ಸಾಧ್ಯವಿಲ್ಲ. ಕೆಲವರು 25 ಕೋಟಿ ರೂ., ಇತರರು 35 ಕೋಟಿ ರೂ. ಮತ್ತು ಕೆಲವರು 50 ಕೋಟಿ ರೂ. ಎಂದು ಹೇಳಿಕೊಳ್ಳುತ್ತಾರೆ. ಮಹಾರಾಷ್ಟ್ರದ ವಿಷಯದಲ್ಲಿ ಯಾರು ಬೇಕಾದರೂ ಹಣದ ಮೊತ್ತವನ್ನು ಊಹಿಸಬಹುದು. ದೇಶ ಎಲ್ಲಿಗೆ ಹೋಗುತ್ತಿದೆ? ಈ ರೀತಿಯಾದರೆ ಪ್ರಜಾಪ್ರಭುತ್ವ ಉಳಿಯಲು ಹೇಗೆ ಸಾಧ್ಯ?" ಎಂದು ಮಾಜಿ ಮುಖ್ಯಮಂತ್ರಿ ಪ್ರಶ್ನಿಸಿದರು.
ಗೆಹ್ಲೋಟ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ವಿವಿಧ ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ. ಕೆಲವು ತಜ್ಞರು ಗೆಹ್ಲೋಟ್ ಅವರ ಹೇಳಿಕೆ ಪರೋಕ್ಷವಾಗಿ ಪಕ್ಷದೊಳಗಿನ ಅವರ ಮಾಜಿ ಉಪ ಮುಖ್ಯಮಂತ್ರಿ ಮತ್ತು ರಾಜಕೀಯ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಅವರನ್ನು ಗುರಿಯಾಗಿರಿಸಿಕೊಂಡಿದೆ ಎಂದಿದ್ದಾರೆ.
ಗೆಹ್ಲೋಟ್ ಅವರ ಅಧಿಕಾರಾವಧಿಯಲ್ಲಿ ಪೈಲಟ್, ಅವರ ವಿರುದ್ಧವೇ ದಂಗೆ ಎದ್ದರು ಮತ್ತು ತಮ್ಮ ಬೆಂಬಲಿತ ಶಾಸಕರೊಂದಿಗೆ ಮಾನೇಸರ್‌ಗೆ ತೆರಳಿದ್ದರು. ಅಂದಿನಿಂದ, ಗೆಹ್ಲೋಟ್ ಬಿಜೆಪಿ ಮತ್ತು ಪೈಲಟ್ ಇಬ್ಬರೂ ತಮ್ಮ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ನಿರಂತರವಾಗಿ ಆರೋಪಿಸಿದ್ದರು.