ನವದೆಹಲಿ: ಆಕ್ಸಿಯಮ್-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಪ್ರವೇಶಿಸುತ್ತಿರುವ 39 ವರ್ಷದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ, ಇಂದು ಭೂ ಕಕ್ಷೆಯಿಂದ ತನ್ನ ಮೊದಲ ಸಂದೇಶ ಕಳುಹಿಸಿದ್ದಾರೆ.
ಸ್ಪೇಸ್ ಕ್ರಾಪ್ಟ್ ನ ಡ್ರ್ಯಾಗನ್ ನೌಕೆಯಿಂದ ಮಾತನಾಡಿರುವ ಶುಕ್ಲಾ, 'ದೇಶವಾಸಿಗಳಿಗೆ ನಮಸ್ಕಾರ' ಎಂದು ಹೇಳುವ ಮೂಲಕ ದೇಶಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಬಳಿಕ ಫಾಲ್ಕನ್ 9 ರಾಕೆಟ್ ಪ್ರಯಾಣ ಕುರಿತು ವಿವರಿಸಿದ್ದು, What a ride! ಎಂದು ಉದ್ಗರಿಸಿದ್ದಾರೆ. ಪ್ರಯಾಣ ಆರಂಭವಾದಾಗ, ನಿಮ್ಮ ಸೀಟಿಗೆ ಇದ್ದಕ್ಕಿದ್ದಂತೆ ನೂಕಲ್ಪಟ್ಟಂತೆ ಅನುಭವಾಗುತ್ತದೆ. ಬೇರೆನೂ ಇಲ್ಲ. ನಿರ್ವಾತದಲ್ಲಿ ತೇಲುತ್ತಿರುತ್ತೀರಿ ಎಂದು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ಹೇಗೆ ನಡೆಯಬೇಕು ಮತ್ತು ತಿನ್ನಬೇಕು ಎಂಬುದರ ಬಗ್ಗೆ ಮಗುವಿನಂತೆ ಕಲಿಯುತ್ತಿದ್ದೇನೆ ಎಂದು ಅವರು ಅಲ್ಲಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಗುರುತ್ವಾಕರ್ಷಣೆಗೆ ಹೊಂದಿಕೊಳ್ಳುವ ಸವಾಲು ಕುರಿತು ಮಾತನಾಡಿದ್ದಾರೆ.
ಈ ಮಿಷನ್ ಶುಕ್ಲಾಗೆ ಮಾತ್ರವಲ್ಲ, ರಾಷ್ಟ್ರಕ್ಕೂ ಐತಿಹಾಸಿಕ ಮಹತ್ವವನ್ನು ಹೊಂದಿದೆ. 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರ ಐತಿಹಾಸಿಕ ಹಾರಾಟದ 41 ವರ್ಷಗಳ ಅಂತರದ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಪ್ರಜೆ ಶುಕ್ಲಾ ಆಗಿದ್ದಾರೆ. ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯರಾಗಿದ್ದಾರೆ.
ಗಗನಯಾತ್ರಿ ಶುಕ್ಲಾ ಕೈಯಲ್ಲಿ ಟಾಯ್!
ಹಂಸದ ಆಟಿಕೆ ಹಿಡಿದುಕೊಂಡು ಶುಕ್ಲಾ ಮಾತನಾಡಿದ್ದು, ಅದನ್ನು ಯಾಕೆ ಬಾಹ್ಯಾಕಾಶಕ್ಕೆ ಅವರ ತೆಗೆದುಕೊಂಡು ಹೋಗಿದ್ದಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.
ಭಾರತೀಯ ಸಂಸ್ಕೃತಿಯಲ್ಲಿ, ಹಂಸವು ಬುದ್ಧಿವಂತಿಕೆಯ ಸಂಕೇತವಾಗಿದೆ. ಹಾಗಾಗೀ ಅದನ್ನು ಬಾಹ್ಯಾಕಾಶಕ್ಕೆ ಅವರು ತೆಗೆದುಕೊಂಡು ಹೋಗಿರುವುದಾಗಿ ಅವರು ತಿಳಿಸಿದ್ದಾರೆ.