ಝಾನ್ಸಿ: ಮೇ 19 ರಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ನಡೆದ ಘಟನೆಯ ಬಗ್ಗೆ ಬಿಜೆಪಿಯ ಬಬಿನಾ ಶಾಸಕ ರಾಜೀವ್ ಸಿಂಗ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಘಟನೆ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಅವರು, ದೆಹಲಿಯಿಂದ ಝಾನ್ಸಿಗೆ ಪತ್ನಿ ಮತ್ತು ಮಕ್ಕಳೊಂದಿಗೆ ಪ್ರಯಾಣ ನಡೆಸಲಾಗುತ್ತಿದ್ದು. ಈ ವೇಳೆ ಕುಟುಂಬವು ಒಟ್ಟಿಗೆ ಕುಳಿತುಕೊಳ್ಳಲು ಆಸನಗಳನ್ನು ಬದಲಾಯಿಸಲು ಪ್ರಯಾಣಿಕರೊಬ್ಬರ ಬಳಿ ಮನವಿ ಮಾಡಿಕೊಳ್ಳಲಾಗಿತ್ತು.
ಈ ವೇಳೆ ಪ್ರಯಾಣಿಕ ಹಾಗೂ ಆತನ ಜೊತೆಗಿದ್ದವರು ಅಸಭ್ಯವಾಗಿ ಪ್ರತಿಕ್ರಿಯಿಸಿದ್ದರು. ಹಾಗೂ ಬೆದರಿಕೆಯನ್ನೂ ಹಾಕಿದ್ದರು. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಕೂಡ ಇದೆ ಎಂದು ಹೇಳಿದರು.
ನನ್ನ ಬೆಂಬಲಿಗರು ಅತಿಯಾದ ಉದ್ರೇಕದಿಂದ ನಡೆದುಕೊಂಡಿದ್ದು, ಬೆಂಬಲಿಗರ ವರ್ತನೆಯನ್ನು ನಾನು ಬೆಂಬಲಿಸುವುದಿಲ್ಲ. ಇದು ದುರಾದೃಷ್ಟಕರ ಸಂಗತಿ. ಘಟನೆ ಬಳಿಕ ನಾನು ಪ್ರಯಾಣಿಕನ ಬಳಿ ಕ್ಷಮೆಯಾಚಿಸಿದ್ದೇನೆ. ಅವರೂ ಕೂಡ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ. ತಪ್ಪು ತಿಳುವಳಿಕೆಯಿಂದ ಹೀಗಾಗಿಗೆ ಎಂದು ಆತ ಕೂಡ ಹೇಳಿದ್ದಾರೆಂದು ತಿಳಿಸಿದ್ದಾರೆ.
ಈ ನಡುವೆ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣ ಶುಕ್ಲಾ ಅವರು ರಾಜೀವ್ ಸಿಂಗ್ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ಕೃತ್ಯ ಗಂಭೀರ ಅಶಿಸ್ತಿನ ಅಡಿಯಲ್ಲಿ ಬರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದ್ದು, 7 ದಿನಗಳ ಒಳಗೆ ಲಿಖಿತ ವಿವರಣೆ ನೀಡುವಂತೆ ಆಗ್ರಹಿಸಿದ್ದಾರೆ.