ಅಹಮದಾಬಾದ್: ಅಹಮದಾಬಾದ್ ವಿಮಾನ ಅಪಘಾತ ಸಂಭವಿಸಿದ ಎರಡು ವಾರಗಳ ನಂತರ, ಕೊನೆಯ ಮೃತದೇಹದ ಗುರುತನ್ನು ಡಿಎನ್‌ಎ ಪರೀಕ್ಷೆಯು ದೃಢಪಡಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ಈಗ 260 ಆಗಿದೆ. ಕೊನೆಯ ಬಲಿಪಶುವಿನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಈ ಹಿಂದೆ ಸಾವಿನ ಸಂಖ್ಯೆಯನ್ನು 270 ಎಂದು ವೈದ್ಯರು ಹೇಳಿದ್ದರು.
ಜೂನ್ 12 ರಂದು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಸೆಕೆಂಡ್ ಗಳಲ್ಲಿ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನ ಮೇಘನಿನಗರ ಪ್ರದೇಶದ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತ್ತು. ಇದರಿಂದಾಗಿ ವಿಮಾನದಲ್ಲಿದ್ದ 241 ಮಂದಿ ಹಾಗೂ ಹಾಸ್ಟೆಲ್ ನಲ್ಲಿದ್ದ ಕೆಲವರು ಮೃತಪಟ್ಟಿದ್ದರು. ಒಬ್ಬ ಪ್ರಯಾಣಿಕ ಪವಾಡ ಸದೃಶವಾಗಿ ಬದುಕುಳಿದಿದ್ದಾರೆ.
"ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಪೈಕಿ ಕೊನೆಯ ಮೃತದೇಹದ ಡಿಎನ್‌ಎ ಹೊಂದಾಣಿಕೆಯಾಗಿದ್ದು, ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ" ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ ರಾಕೇಶ್ ಜೋಶಿ ತಿಳಿಸಿದ್ದಾರೆ.
ಇದರೊಂದಿಗೆ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 260 ಆಗಿದೆ. ವಿಮಾನ ದುರಂತದಲ್ಲಿ ಗಾಯಗೊಂಡಿರುವ ಮೂವರಿಗೆ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಲ್ಲಿಯವರೆಗೂ ಎಲ್ಲಾ 260 ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾವನ್ನಪ್ಪಿದ 241 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ, 240 ಮಂದಿ ಮೃತದೇಹವನ್ನು ಈ ಹಿಂದೆಯೇ ಗುರುತಿಸಲಾಗಿತ್ತು. ಒಂದು ಮೃತದೇಹದ ಡಿಎನ್ ಎ ಹೊಂದಾಣಿಕೆಯಾಗಿರಲಿಲ್ಲ. ಶುಕ್ರವಾರ ಕೊನೆಯ ಮೃತದೇಹದ ಡಿಎನ್‌ಎ ಹೊಂದಾಣಿಕೆಯಾಗಿದ್ದು, ಬಲಿಪಶುವನ್ನು ಗುರುತಿಸಿದೆ. ವಿಮಾನ ಅಪಘಾತವಾದಾಗ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಅಲ್ಲದೇ ಹಾಸ್ಟೇಲ್ ನಲ್ಲಿದ್ದ ಕೆಲವರು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
40 ವರ್ಷದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ರಮೇಶ್ ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದಾರೆ. ಜೂನ್ 23 ರವರೆಗೆ ಅಧಿಕಾರಿಗಳು 259 ಮೃತದೇಹದ ಗುರುತನ್ನು ದೃಢಪಡಿಸಿದ್ದರು. ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಅವುಗಳ ಪತ್ತೆಗೆ ಡಿಎನ್ ಎ ಪರೀಕ್ಷೆ ಮಾಡಲಾಯಿತು. 181 ಪ್ರಯಾಣಿಕರು ಹಾಗೂ ನೆಲದ ಮೇಲಿದ್ದ 19 ಮಂದಿ ಸೇರಿದಂತೆ 200 ಮಂದಿ ಭಾರತೀಯರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಏಳು ಪೋರ್ಚಗೀಸ್ ಪ್ರಜೆಗಳು, 52 ಬ್ರಿಟನ್ ಪ್ರಜೆಗಳು, ಓರ್ವ ಕೆನಡಾ ಪ್ರಜೆ ಸೇರಿದಂತೆ ಒಟ್ಟಾರೇ 260 ಮಂದಿ ಸಾವನ್ನಪ್ಪಿರುವುದಾಗಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.