ಭುವನೇಶ್ವರ/ ಪುರಿ: ಭಾನುವಾರ ಬೆಳಗಿನ ಜಾವ ಪುರಿಯ ಗುಂಡಿಚಾ ದೇವಸ್ಥಾನದ ಮುಂದೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, 6 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಥಯಾತ್ರೆಯ ರಥ ಎಳೆಯುವ ಆಚರಣೆ ಮುಗಿದು ಗುಂಡಿಚಾ ದೇವಸ್ಥಾನದ ಮುಂದೆ ಮೂರು ರಥಗಳನ್ನು ನಿಲ್ಲಿಸಿದ ನಂತರ ನಸುಕಿನ ಜಾವ 3:30 ರಿಂದ 4:30 ರ ನಡುವೆ ಈ ಘಟನೆ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮೂರನೆಯವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಮಾಧ್ಯಮಗಳಿಗೆ ಈ ಸಾವನ್ನು ದೃಢಪಡಿಸಿದರು, ಇತರ ಆರು ಜನರನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಅವರಲ್ಲಿ ಮೂವರನ್ನು ಈಗ ಬಿಡುಗಡೆ ಮಾಡಲಾಗಿದೆ.
ಮೃತರನ್ನು ಬೋಲಗಢದ ಬಸಂತಿ ಸಾಹು (36), ಬಲಿಪಟ್ಣದ ಪ್ರವತಿ ದಾಸ್ (45) ಮತ್ತು ಖುರ್ದಾದ ಪ್ರೇಮಕಾಂತ್ ಮೊಹಂತಿ (78) ಎಂದು ಗುರುತಿಸಲಾಗಿದೆ.
ಕಾಲ್ತುಳಿತ ಹೇಗೆ ಸಂಭವಿಸಿತು?
ಪಹಾಡ ಭಂಗ ಎಂದು ಕರೆಯಲ್ಪಡುವ ಬೆಳಗಿನ ಆಚರಣೆಗಳು ಪ್ರಾರಂಭವಾದಾಗ ದುರಂತವು ನಡೆದುಹೋಯಿತು. ರಥಗಳ ಮೇಲಿರುವ ದೇವರನ್ನು ನೋಡಲು ಉತ್ಸುಕರಾಗಿ ಭಕ್ತರ ಹಠಾತ್ ಜಮಾಯಿಸಿದರು. ಜಗನ್ನಾಥನ ರಥವಾದ ನಂದಿಘೋಷದ ಮುಂದೆ ಜನಸಮೂಹವು ನೆರೆದಿತ್ತು, ಇದರ ಪರಿಣಾಮವಾಗಿ ಜನರು ಗೊಂದಲದಲ್ಲಿ ಪರಸ್ಪರ ಮೇಲೆ ಬಿದ್ದರು.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲು ಸ್ಥಳೀಯರು ಸಹಾಯ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪಹಾಡ ಭಂಗ ಆಚರಣೆ ಪ್ರಾರಂಭವಾದಾಗ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಕಾನೂನು ಸಚಿವ ಪೃಥಿವಿರಾಜ್ ಹರಿಚಂದನ್ ಅವರು ಘಟನೆಯ ಬಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಮಹಾನಿರ್ದೇಶಕ ವೈ.ಬಿ. ಖುರಾನಿಯಾ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಲು ಪುರಿಗೆ ಧಾವಿಸಿದರು.
ನಿನ್ನೆ ೃ, ಮೂರು ರಥಗಳು ಹಿಂದಿನ ದಿನ ಅಪೂರ್ಣವಾಗಿ ಉಳಿದಿದ್ದ ರಥ ಎಳೆಯುವಿಕೆಯನ್ನು ಪುನರಾರಂಭಿಸಿದ ನಂತರ ಮಧ್ಯಾಹ್ನ 1:30 ರ ಸುಮಾರಿಗೆ ಗುಂಡಿಚಾ ದೇವಾಲಯವನ್ನು ತಲುಪಿದವು. ಈ ವರ್ಷದ ರಥಯಾತ್ರೆಯಲ್ಲಿ ಸಾಮಾನ್ಯಕ್ಕಿಂತ 1.5 ಪಟ್ಟು ಹೆಚ್ಚಿನ ಜನರು ಭಾಗವಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿಯು ಇಂದು ಅಡಪ ಮಂಟಪ ಬಿಜೆ ಆಚರಣೆಗಳನ್ನು ನಡೆಸಲು ನಿರ್ಧರಿಸಿದೆ. ಜನಸಂದಣಿ ಹೆಚ್ಚಾಗುತ್ತಿದ್ದಂತೆಯೇ ರಥಗಳಿಗೆ ಬಳಸುವ ಏಣಿಗಳನ್ನು ಹೊತ್ತ ಟ್ರಕ್ ದೇವಾಲಯದ ಬಳಿಗೆ ಬಂದು ಗೊಂದಲವನ್ನು ಹೆಚ್ಚಿಸಿತು ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
ಮಾಜಿ ಸಿಎಂ ನವೀನ್ ಪಟ್ನಾಯಕ್ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪುರಿಯ ಶಾರದಾಬಲಿಯಲ್ಲಿ ಸಂಭವಿಸಿದ ದುರಂತ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಮೂವರು ಭಕ್ತರ ಕುಟುಂಬಗಳಿಗೆ ನಾನು ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ರಥಯಾತ್ರೆಯ ಸಮಯದಲ್ಲಿ ಜನಸಂದಣಿಯನ್ನು ನಿರ್ವಹಿಸುವಲ್ಲಿನ ಸರ್ಕಾರದ ವೈಫಲ್ಯ ಮತ್ತು ಅಸಮರ್ಥತೆಯನ್ನು ಸೂಚಿಸುತ್ತದೆ ಎಂದರು.