ಬಾಗ್‌ಪತ್: ಉತ್ತರ ಪ್ರದೇಶ ಸರ್ಕಾರಿ ಶಾಸ ಶಿಕ್ಷಕ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ನಡುವೆ ಕ್ರಿಕೆಟ್ ಪಂದ್ಯದ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಬಾಗ್ ಪತ್ ನಲ್ಲಿ ನಡೆದಿದೆ.
ಖೇಕ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸುನ್ಹೇಡಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ, ಕಾನ್‌ಸ್ಟೆಬಲ್ ಗೆ ಗುಂಡಿಕ್ಕಿ ಹತ್ಯೆ ಮಾಡಿದ ನಂತರ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ರಜೆಯ ಮೇಲೆ ಮನೆಗೆ ಬಂದಿದ್ದ ಕಾನ್‌ಸ್ಟೆಬಲ್ ಅಜಯ್ ಕುಮಾರ್(32) ಅವರು, ಭಾನುವಾರ ರಾತ್ರಿ ಊಟದ ನಂತರ ತಮ್ಮ ಗ್ರಾಮದ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ, ಸಹರಾನ್‌ಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಸ್ಥಳೀಯ ಮೋಹಿತ್ ಆರ್ಯ ಅವರನ್ನು ಭೇಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೊದಲು ಇಬ್ಬರ ನಡುವೆ ಮೊದಲು ಕ್ರಿಕೆಟ್ ಪಂದ್ಯದ ವಿಚಾರ ಮತ್ತು ನಂತರ ವಾಟ್ಸಾಪ್ ಚಾಟ್ ವಿಚಾರದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ, ಆರೋಪಿ ಶಿಕ್ಷಕ, ಕಾನ್‌ಸ್ಟೆಬಲ್ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಕುಟುಂಬ ಸದಸ್ಯರು ಗಾಯಗೊಂಡಿದ್ದ ಅಜಯ್ ಕುಮಾರ್ ಅವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸೋನಿಪತ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಪಿ. ಸಿಂಗ್ ಅವರು ಮೃತ ಅಜಯ್ ಕುಮಾರ್ ಅವರು, ಸಹರಾನ್‌ಪುರ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿದ್ದು, ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.
ಈ ಸಂಬಂಧ ಶಿಕ್ಷಕ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.