ಗುವಾಹಟಿ: ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಸೋಮವಾರ ಅಪರಿಚಿತ ದಾಳಿಕೋರರು ಹೊಂಚು ಹಾಕಿ, ಕುಕಿ ಬಂಡುಕೋರ ನಾಯಕನ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಅವರ ಇಬ್ಬರು ಅಂಗರಕ್ಷಕರನ್ನು ಮತ್ತು ಒಬ್ಬ ವೃದ್ಧ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಚುರಾಚಂದ್‌ಪುರ ಪಟ್ಟಣದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಮೊಂಗ್‌ಜಾಂಗ್ ಗ್ರಾಮದ ಬಳಿಯ ಜೆಸಾಮಿ ರಸ್ತೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಗುಂಡಿನ ದಾಳಿ ನಡೆದಿದೆ.
ಕುಕಿ ರಾಷ್ಟ್ರೀಯ ಸೇನೆಯ(ಕೆಎನ್‌ಎ) ಉಪ ಕಮಾಂಡರ್-ಇನ್-ಚೀಫ್ ಥಾಪಿ ಹಾವೋಕಿಪ್ ಅವರು ತಮ್ಮ ಇಬ್ಬರು ಅಂಗರಕ್ಷಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ಕಾರಿನಲ್ಲಿ ಈ ಮೂವರು ಹಾಗೂ ಇತರ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ದಾಳಿಕೋರರು ಹತ್ತಿರದಿಂದ ಗುಂಡು ಹಾರಿಸಿದ್ದು, ಸ್ಥಳದಿಂದ ಒಂದು ಡಜನ್‌ಗೂ ಹೆಚ್ಚು ಖಾಲಿ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಬಣಗಳ ವೈಷಮ್ಯಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಯಾವುದೇ ಗುಂಪು ಇದುವರೆಗೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಘಟನೆಯ ನಂತರ, ಪರಿಸ್ಥಿತಿ ಉಲ್ಬಣಗೊಳ್ಳುವ ಭೀತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ಧಾವಿಸಿವೆ.
ಈ ವರ್ಷದ ಫೆಬ್ರವರಿಯಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ಆದರೂ ಆಗಾಗ ಹಿಂಸಾಚಾರ ಘಟನೆಗಳು ನಡೆಯುತ್ತಿವೆ.